ಯುಎಸ್ ಓಪನ್: ನಡಾಲ್ ಗಾಯಗೊಂಡು ನಿವೃತ್ತಿ;ಡೆಲ್ ಪೊಟ್ರೊ ಫೈನಲ್‌ಗೆ

Update: 2018-09-08 06:59 GMT

 ನ್ಯೂಯಾರ್ಕ್, ಸೆ.8: ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ಗಾಯಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ ಮೂರನೇ ಶ್ರೇಯಾಂಕದ ಮಾರ್ಟಿನ್ ಡೆಲ್ ಪೊಟ್ರೊ ಯುಎಸ್ ಓಪನ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸೆಮಿ ಫೈನಲ್‌ನಲ್ಲಿ ನಡಾಲ್ ಮಂಡಿನೋವಿನಿಂದ ಸ್ಪರ್ಧೆಯಿಂದ ಹಿಂದೆ ಸರಿದಾಗ 2009ರ ಚಾಂಪಿಯನ್ ಡೆಲ್ ಪೊಟ್ರೊ 7-6(7/3), 6-2 ಸೆಟ್‌ಗಳಿಂದ ಮುನ್ನಡೆಯಲ್ಲಿದ್ದರು.

 ಅರ್ಜೆಂಟೀನದ ಡೆಲ್ ಪೊಟ್ರೊ ರವಿವಾರ ನಡೆಯುವ ಫೈನಲ್‌ನಲ್ಲಿ 2011 ಹಾಗೂ 2015ರ ಯುಎಸ್ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಕ್‌ರನ್ನು ಎದುರಿಸಲಿದ್ದಾರೆ.

ಇದೇ ವೇಳೆ, ಎರಡನೇ ಸೆಮಿ ಫೈನಲ್‌ನಲ್ಲಿ ಜಪಾನ್‌ನ ಕಿ ನಿಶಿಕೊರಿಯವರನ್ನು 6-3, 6-4, 6-2 ಸೆಟ್‌ಗಳ ಅಂತರದಿಂದ ಮಣಿಸಿದ ಜೊಕೊವಿಕ್ ಯುಎಸ್ ಓಪನ್‌ನಲ್ಲಿ 8ನೇ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ವಿಂಬಲ್ಡನ್ ಚಾಂಪಿಯನ್ ಜೊಕೊವಿಕ್ 11ನೇ ಬಾರಿ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್ ಪಂದ್ಯವಾಡಿದ್ದು ನಿಶಿಕೊರಿ ವಿರುದ್ಧ ಆಡಿರುವ 17ನೇ ಪಂದ್ಯದಲ್ಲಿ 15ನೇ ಬಾರಿ ಜಯ ಸಾಧಿಸಿದ್ದಾರೆ.

ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 23ನೇ ಬಾರಿ ಫೈನಲ್‌ಗೆ ತೇರ್ಗಡೆಯಾಗಿರುವ ಜೊಕೊವಿಕ್ ಫೈನಲ್‌ನಲ್ಲಿ ಡೆಲ್ ಪೊಟ್ರೊರನ್ನು ಎದುರಿಸಲಿದ್ದಾರೆ. ಜೊಕೊವಿಕ್ ಅವರು ಡೆಲ್ ಪೊಟ್ರೊ ವಿರುದ್ಧ ಕಳೆದ 10 ವರ್ಷಗಳಲ್ಲಿ ಆಡಿರುವ 18 ಪಂದ್ಯಗಳ ಪೈಕಿ 14ರಲ್ಲಿ ಜಯ ಸಾಧಿಸಿ ಸ್ಪಷ್ಟ ಮೇಲುಗೈ ಪಡೆದಿದ್ದಾರೆ. 2007 ಹಾಗೂ 2012ರ ಯುಎಸ್ ಓಪನ್‌ನಲ್ಲಿ ಒಂದೂ ಸೆಟ್ ಸೋಲದೇ ಡೆಲ್ ಪೊಟ್ರೊರನ್ನು ಸದೆ ಬಡಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News