ತೇಜಸ್ವಿ ಪ್ರತಿಷ್ಠಾನಕ್ಕೆ ಐದು ಕೋಟಿ ಅನುದಾನ ಬಿಡುಗಡೆ: ಡಾ.ಜಯಮಾಲಾ

Update: 2018-09-08 15:13 GMT

ಬೆಂಗಳೂರು, ಸೆ.8: ಕನ್ನಡದ ಹಿರಿಯ ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಅವರ ಪ್ರತಿಷ್ಠಾನಕ್ಕೆ ಐದು ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಭರವಸೆ ನೀಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿಯ ಜನ್ಮದಿನಾಚರಣೆ ಅಂಗವಾಗಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ತೇಜಸ್ವಿ ಬಾವಲಿಗಳ ನಿಗೂಢ ಲೋಕ ಎಂಬ ಛಾಯಾ ಚಿತ್ರ ಮತ್ತು ಸಾಕ್ಷಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಮ್ಮ ಸಾಹಿತ್ಯದ ಮೂಲಕ ಪರಿಸರ ಹಾಗೂ ಮಾನವ ಸಂಬಂಧಗಳ ನಡುವಿನ ಎಳೆಗಳನ್ನು ತೋರಿಸಿಕೊಟ್ಟಿದ್ದ ತೇಜಸ್ವಿ ನಮ್ಮಿಂದ ದೂರವಾಗಿ ಹಲವಾರು ವರ್ಷಗಳು ಪೂರ್ಣಗೊಂಡರೂ, ಅವರ ನೆನಪು ಎಂದಿಗೂ ಮರೆಯಲಾಗದ್ದು. ಈ ನಿಟ್ಟಿನಲ್ಲಿ ಅವರ ಸಾಹಿತ್ಯವನ್ನು ಮತ್ತಷ್ಟು ಎತ್ತರಕ್ಕೇರಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಲು ಅನುದಾನ ನೀಡಲು ಇಲಾಖೆ ಸಿದ್ಧವಿದೆ ಎಂದರು.

ಮಾನವನಿಗೆ ಪ್ರಕೃತಿಯ ಅಗತ್ಯವಿದೆ ಹೊರತು ಪ್ರಕೃತಿಗೆ ಮಾನವನ ಅಗತ್ಯವಿಲ್ಲ ಎಂಬುದು ಪೂರ್ಣಚಂದ್ರ ತೇಜಸ್ವಿ ಹೇಳುತ್ತಿದ್ದರು. ಇತ್ತೀಚಿಗೆ ಕೊಡಗು, ಕೇರಳದಲ್ಲಿ ಸಂಭವಿಸಿದ ಪ್ರವಾಹದ ವೇಳೆ ಈ ಮಾತುಗಳ ಅರ್ಥ ನಮಗಾಗಿದೆ. ಈ ನಿಟ್ಟಿನಲ್ಲಿ ಪರಿಸರವನ್ನು ಪ್ರೀತಿಸುವುದರ ಜತೆಗೆ ಪರಿಸರವನ್ನು ಸಂರಕ್ಷಣೆ ಮಾಡುವುದು ತೇಜಸ್ವಿಗೆ ನಾವು ನೀಡಿದ ನಿಜವಾದ ಗೌರವವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇಂದಿನ ಮಾನವನ ದುರಾಸೆ, ರಾಜಕೀಯ ಲಾಭಕೋರತನದ ಕುರಿತು ಅವರು ಅಂದು ಆಡಿದ್ದ ಮಾತುಗಳು ಇಂದೂ ಪ್ರಸ್ತುತವಾಗಿದೆ. ಸಾಹಿತ್ಯ, ಕೃಷಿ, ಪರಿಸರ ಕಾಳಜಿ, ವಿಜ್ಞಾನ, ಮಾನವಶಾಸ್ತ್ರ ಮುಂತಾದುವುಗಳ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿದ್ದ ತೇಜಸ್ವಿ ಬದುಕಿದ್ದು ಸಹ ದಟ್ಟ ಹಸಿರಿನ ಕಾಡುಗಳ ನಡುವೆ. ಅವರ ಸೂಕ್ಷ್ಮ ಜೀವನವನ್ನು ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಮಾತನಾಡಿ, ರಾಜ್ಯ ಸರಕಾರ ತೇಜಸ್ವಿ ನೆನಪಿನ ಪ್ರತಿಷ್ಠಾನ ಸ್ಥಾಪಿಸಿದ್ದು, ತೇಜಸ್ವಿ ಅವರ ಮನೆಯನ್ನು ಸಂಗ್ರಹಾಲಯವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹಾಗೂ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ, ಗ್ರಂಥಾಲಯ ಮತ್ತು ಅವರ ಕೃತಿಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡುವುದು ಪ್ರತಿಷ್ಠಾನದ ಉದ್ದೇಶವಾಗಿದೆ ಎಂದು ಹೇಳಿದರು.

ಚಾರಣ, ಪರಿಸರ ಜಾಗೃತಿ ಕುರಿತ ಸಂವಾದ ಹಾಗೂ ಕಾರ್ಯಕ್ರಮಗಳು ಹಾಗೂ ಪ್ರತಿ ವರ್ಷ ಪರಿಸರ, ಸಾಹಿತ್ಯ, ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸ ಮಾಡಲಾಗುತ್ತಿದೆ. ಗ್ರಾಮ ಮತ್ತು ಶಾಲಾ-ಕಾಲೇಜುಗಳ ಮಟ್ಟದಲ್ಲಿ ಪರಿಸರ ಸ್ನೇಹಿ ಘಟಕಗಳನ್ನು ಸ್ಥಾಪಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News