ಜನರಿಗಾಗಿ ಕೋರ್ಟ್‌ಗಳಿವೆ ಎಂಬುದು ಮೊದಲು ಅರ್ಥವಾಗಲಿ: ನ್ಯಾ. ಎಸ್.ಅಬ್ದುಲ್ ನಜೀರ್

Update: 2018-09-08 15:15 GMT

ಬೆಂಗಳೂರು, ಸೆ.8: ಕೋರ್ಟ್‌ಗಳಿಗಾಗಿ ಜನರು ಇರುವುದಿಲ್ಲ. ಬದಲಿಗೆ ಜನರಿಗಾಗಿಯೇ ಹೈಕೋರ್ಟ್‌ಗಳಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕೆಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹೇಳಿದ್ದಾರೆ.

ಶನಿವಾರ ಗುಲ್ಬರ್ಗ ನ್ಯಾಯವಾದಿಗಳ ಸಂಘವು ಆಯೋಜಿಸಿದ್ದ ಕಲಬುರಗಿ ಹೈಕೋರ್ಟ್ ಪೀಠದ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಲಬುರಗಿಯಲ್ಲಿ ಈ ಪೀಠ ಸ್ಥಾಪನೆಯಾದ ನಂತರ ಹೈ-ಕ ಪ್ರದೇಶಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನ್ಯಾಯ ಸಿಗುವಂತಾಗಿದೆ ಎಂದರು.

ಈ ಪೀಠದ ಆರಂಭಕ್ಕೆ ಕಾರಣರಾದ ನ್ಯಾ.ಎನ್.ಕೆ.ಜೈನ್, ನ್ಯಾ.ಸಿರಿಯಾಕ್ ಜೋಸೆಫ್, ನ್ಯಾ.ಎನ್.ಕೆ.ಪಾಟೀಲ್, ಈಗಿನ ಸಿಜೆ ದಿನೇಶ್ ಮಾಹೇಶ್ವರಿ ಅವರನ್ನು ನೆನಪಿಸಿಕೊಳ್ಳುವುದು ಅಗತ್ಯವಿದೆ. ಕಳೆದ 10 ವರ್ಷಗಳಲ್ಲಿ ಈ ಭಾಗದ 1.30 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಇನ್ನುಳಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅಗತ್ಯವಿರುವ ನ್ಯಾಯಮೂರ್ತಿಗಳ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಸವಣ್ಣನವರು ಹೇಳಿದ ಕಳಬೇಡ, ಇದಿರು ಹಳಿಯಲು ಬೇಡ ಎಂಬತ್ಯಾದಿ ಎಂಟು ಬೇಡಗಳನ್ನು ಬಿಟ್ಟರೆ ಸಾಕು, ಪ್ರತಿ ಮನುಷ್ಯ ನ್ಯಾಯಸಮ್ಮತ ಬದುಕು ನಡೆಸಬಲ್ಲ ಎಂದು ನುಡಿದರು.

ನ್ಯಾಯಮೂರ್ತಿಗಳ ನೇಮಕ ಶೀಘ್ರ: ಕಲಬುರಗಿ ವಿಭಾಗದ ಜನರಿಗೆ ತ್ವರಿತ ನ್ಯಾಯದಾನ ಮಾಡಲು ಶೀಘ್ರವೇ ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹೇಳಿದರು. ನ್ಯಾಯಾಂಗ ಇಲಾಖೆಯಲ್ಲಿರುವವರು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಕಾರಣಾಂತರಗಳಿಂದ ಪ್ರಕರಣಗಳ ವಿಚಾರಣೆ ಮುಂದೂಡಬಾರದು. ನ್ಯಾಯಾಲಯಗಳು ಇರುವುದೆ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಹೊರತು, ಹೆಚ್ಚು ಮಾಡುವುದಕ್ಕಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News