ಸರಕಾರ ಮನೆ ನಿರ್ಮಿಸಿಕೊಟ್ಟರೆ ತುಂಬಾ ಉಪಕಾರವಾಗುತ್ತದೆ: ಸ್ವಪ್ನಾ ಬರ್ಮನ್

Update: 2018-09-08 18:32 GMT

ಕೋಲ್ಕತಾ, ಸೆ.8: ಪಶ್ಚಿಮ ಬಂಗಾಳ ಸರಕಾರ ತನಗೆ ಕೇವಲ 10 ಲಕ್ಷ ರೂ.ಬಹುಮಾನ ಘೋಷಿಸಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಏಶ್ಯನ್ ಗೇಮ್ಸ್‌ನಲ್ಲಿ ಹೆಪ್ಟಾಥ್ಟಾನ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಅಥ್ಲೀಟ್ ಸ್ವಪ್ನಾ ಬರ್ಮನ್,‘‘ನಗರದಲ್ಲಿನ ಸಾಯ್ ಕಾಂಪ್ಲೆಕ್ಸ್ ಸಮೀಪ ಮನೆ ನಿರ್ಮಿಸಿಕೊಟ್ಟರೆ ತುಂಬಾ ಉಪಕಾರವಾಗುತ್ತದೆ’’ಎಂದರು.

ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್ ನ ಹೆಪ್ಟಾಥ್ಟಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದ ಸ್ವಪ್ನಾಗೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 10 ಲಕ್ಷ ರೂ. ಬಹುಮಾನ ಹಾಗೂ ಸರಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದರು.

ಪ.ಬಂಗಾಳ ಸರಕಾರ ಕಡಿಮೆ ಬಹುಮಾನ ಘೋಷಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಹರ್ಯಾಣ ಸರಕಾರ ಪ್ರತಿ ಅಥ್ಲೀಟ್‌ಗೆ ತಲಾ 3 ಕೋಟಿ ರೂ. ಹಾಗೂ ನೆರೆಯ ಒಡಿಶಾ ಸರಕಾರ ಓಟಗಾರ್ತಿ ದ್ಯುತಿ ಚಂದ್‌ಗೆ ಎರಡು ಬೆಳ್ಳಿ ಪದಕ ಜಯಿಸಿದ್ದಕ್ಕೆ 3 ಕೋ.ರೂ. ಬಹುಮಾನ ಘೋಷಿಸಿದೆ.

‘‘ಬಹುಮಾನದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ನನಗೆ ಹಾಗೂ ನನ್ನ ಸಹೋದರನಿಗೆ ಕೆಲಸ ನೀಡುವುದಾಗಿ ಸರಕಾರ ಭರವಸೆ ನೀಡಿದ್ದನ್ನು ಕೇಳಿದ್ದೇನೆ. ನನಗೆ ಸಾಕಷ್ಟು ಆಫರ್‌ಗಳು ಬಂದಿವೆ. ಆ ಬಗ್ಗೆ ನಾನು ಇನ್ನಷ್ಟೇ ನಿರ್ಧರಿಸಬೇಕಾಗಿದೆ’’ ಎಂದು ಸಾಯ್ ಸಂಕೀರ್ಣದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಪ್ನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯ ಸರಕಾರದಿಂದ ಏನನ್ನು ಬಯಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಪ್ನಾ,‘‘ಸಾಲ್ಟ್‌ಲೇಕ್‌ನಲ್ಲಿರುವ ಸಾಯ್ ಕಾಂಪ್ಲೆಕ್ಸ್ ಬಳಿ ಖಾಯಂ ನಿವಾಸ ಹೊಂದುವುದು ನನ್ನ ಏಕೈಕ ಬಯಕೆ. ಇದೀಗ ನಾನು ಸಾಯ್ ಕಾಂಪ್ಲೆಕ್ಸ್ ನಲ್ಲಿ ನೆಲೆಸಿದ್ದೇನೆ. ನನ್ನ ಪ್ರದರ್ಶನ ಚೆನ್ನಾಗಿರದಿದ್ದರೆ ಅಲ್ಲಿ ನೆಲೆಸುವಂತಿಲ್ಲ. ಸರಕಾರ ನನಗೆ ಮನೆ ನಿರ್ಮಿಸಿಕೊಟ್ಟರೆ ತುಂಬಾ ಉಪಕಾರವಾಗುತ್ತದೆ’’ ಎಂದರು.

‘‘2015ರಲ್ಲಿ ಸಾಕಷ್ಟು ಬೇಸರದಿಂದ ಮನೆ ತೊರೆದು, ಮೂರು ತಿಂಗಳ ಕಾಲ ಮನೆಗೆ ವಾಪಸಾಗದೇ ಇದ್ದ ಸಂದರ್ಭ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಗಿದೆ. ಗುರುಗಳು(ಸುಭಾಷ್ ಸರ್ಕಾರ್)ನನಗೆ ಹಲವು ಬಾರಿ ಕರೆ ಮಾಡಿ ಜಲ್‌ಪೈಗುರಿಗೆ ಬರುವಂತೆ ಒತ್ತಾಯಿಸಿದ್ದರು. ನನಗೆ ಕೋಪ ಜಾಸ್ತಿ. ಕೊನೆಗೂ ಗುರುವಿನ ಮಾತಿಗೆ ಮಣಿದು ಮನೆಗೆ ವಾಪಸಾಗಿದ್ದೆ. ಅಂದು ನಾನು ಗುರುಗಳ ಮಾತು ಕೇಳದೇ ಇರುತ್ತಿದ್ದರೆ ಈಗ ಈ ಸ್ಥಾನದಲ್ಲಿರುತ್ತಿರಲಿಲ್ಲ’’ ಎಂದು ಸ್ವಪ್ನಾ ತನ್ನ ಹಳೆ ನೆನಪನ್ನು ಬಿಚ್ಚಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News