ಗುಂಪುಹತ್ಯೆಯಲ್ಲಿ ಪಾಲ್ಗೊಂಡವರು ರಾಷ್ಟ್ರೀಯವಾದಿಗಳಲ್ಲ: ವೆಂಕಯ್ಯ ನಾಯ್ಡು

Update: 2018-09-09 10:07 GMT

ಹೊಸದಿಲ್ಲಿ, ಸೆ.9: ಗುಂಪುಹತ್ಯೆಯಲ್ಲಿ ಪಾಲ್ಗೊಂಡವರು ರಾಷ್ಟ್ರೀಯವಾದಿಗಳೆಂದು ಹೇಳಿಕೊಳ್ಳುವಂತಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ನಡವಳಿಕೆಯನ್ನು ಬದಲಾಯಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಘಟನೆಗಳನ್ನು ರಾಜಕೀಯಗೊಳಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಪ್ರಕರಣಗಳನ್ನು ರಾಜಕೀಯ ಪಕ್ಷಗಳ ಜತೆ ಸಂಬಂಧ ಕಲ್ಪಿಸುವಂತಿಲ್ಲ ಎಂದು ಹೇಳಿದರು.

"ಸಾಮಾಜಿಕ ಬದಲಾವಣೆ ಇಂದಿನ ಅಗತ್ಯ. ಹತ್ಯೆ ಪ್ರಕರಣಗಳು ಈ ಪಕ್ಷ ಅಥವಾ ಆ ಪಕ್ಷದ ಕಾರಣದಿಂದ ನಡೆಯುವಂಥವುಗಳಲ್ಲ. ಈ ಪಕ್ಷಗಳಿಗೆ ನೀವು ಅದನ್ನು ಸಂಬಂಧ ಕಲ್ಪಿಸಿದ ತಕ್ಷಣ ಮೂಲ ಉದ್ದೇಶವೇ ಕಳೆದುಹೋಗುತ್ತದೆ" ಎಂದು ಅವರು ವಿವರಿಸಿದರು.

ದ್ವೇಷ ಮತ್ತು ಹತ್ಯೆ ಪ್ರಕರಣಗಳ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ, ಇದು ಹೊಸ ಪ್ರವೃತ್ತಿ ಅಲ್ಲ. ಹಿಂದೆ ಕೂಡಾ ಇಂತಹ ಘಟನೆಗಳು ನಡೆದಿವೆ ಎಂದು ಸ್ಪಷ್ಟಪಡಿಸಿದರು.

"ಸಾಮಾಜಿಕ ಪ್ರವೃತ್ತಿ ಬದಲಾಗಬೇಕಾಗಿದೆ. ಮತ್ತೊಬ್ಬನನ್ನು ಕೊಂದ ನೀವು ಹೇಗೆ ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳಲು ಸಾಧ್ಯ?. ಧರ್ಮ, ಜಾತಿ ಅಥವಾ ಬಣ್ಣ, ಲಿಂಗದ ಆಧಾರದಲ್ಲಿ ತಾರತಮ್ಯ ನಡೆಯುತ್ತಿದೆ. ರಾಷ್ಟ್ರೀಯವಾದ, ಭಾರತ್ ಮಾತಾ ಕಿ ಜೈ ಎನ್ನುವುದಕ್ಕೆ ವಿಸ್ತೃತ ಅರ್ಥವಿದೆ" ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪ್ರತಿಪಾದಿಸಿದರು.

ಇಂತಹ ಕೆಲ ಘಟನೆಗಳನ್ನು ಕಾನೂನಿನಿಂದಷ್ಟೇ ನಿರ್ವಹಿಸಲು ಸಾಧ್ಯವಿಲ್ಲ. ಸಾಮಾಜಿಕ ಬದಲಾವಣೆಯಿಂದಷ್ಟೇ ಇದನ್ನು ತಡೆಯಲು ಸಆಧ್ಯ ಎಂದು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News