ಚಿಕಾಗೋ: ವಿಶ್ವ ಹಿಂದು ಸಮ್ಮೇಳನದಲ್ಲಿ ಅತಿಥಿಗಳಿಗೆ ‘ಮೃದು’, ‘ಗಟ್ಟಿ’ ಲಾಡುಗಳ ಉಡುಗೊರೆ !

Update: 2018-09-09 14:41 GMT

ಷಿಕಾಗೋ,ಸೆ.9: ಷಿಕಾಗೋದಲ್ಲಿ 1983ರಲ್ಲಿ ನಡೆದಿದ್ದ ವಿಶ್ವ ಧರ್ಮ ಸಂಸತ್‌ನಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ 125ನೆಯ ವರ್ಷಾಚರಣೆಯ ಅಂಗವಾಗಿ ಇಲ್ಲಿ ನಡೆಯುತ್ತಿರುವ ಎರಡನೇ ವಿಶ್ವ ಹಿಂದು ಸಮ್ಮೇಳನದಲ್ಲಿ ಪಾಲ್ಗೊಂಡ ಪ್ರತಿನಿಧಿಗಳಿಗೆ ಮೃದು ಮತ್ತು ಗಟ್ಟಿಯಾದ ಲಾಡುಗಳಿದ್ದ ಪ್ಯಾಕೆಟ್‌ಗಳನ್ನು ನೀಡಿ ಸ್ವಾಗತಿಸಲಾಗಿದೆ.

ಸಮ್ಮೇಳನದ ಸಂಘಟಕರು ತಿಳಿಸಿರುವಂತೆ ಹಿಂದು ಸಮಾಜದಲ್ಲಿ ಒಗ್ಗಟ್ಟಿಲ್ಲ ಎಂಬ ಸಾಮಾನ್ಯ ಅಭಿಪ್ರಾಯವನ್ನು ತಿಳಿಸಲು ಈ ಸಿಹಿ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ.

 ಮೃದು ಲಾಡುಗಳು ಹಿಂದುಗಳನ್ನು ಸುಲಭವಾಗಿ ಒಡೆಯಬಹುದು ಮತ್ತು ಆಪೋಷನ ತೆಗೆದುಕೊಳ್ಳಬಹುದು ಎಂಬ ಇಂದಿನ ಸ್ಥಿತಿಯನ್ನು ಸೂಚಿಸುತ್ತಿದ್ದರೆ, ಗಟ್ಟಿ ಲಾಡುಗಳು ಹಿಂದು ಸಮಾಜ ಭವಿಷ್ಯದಲ್ಲಿ ಹೇಗಿರಬೇಕು ಎನ್ನುವುದನ್ನು ಸೂಚಿಸುತ್ತಿವೆ. ಹಿಂದು ಸಮಾಜವು ಬಲಿಷ್ಠ ಬಂಧದೊಂದಿಗೆ ಗಟ್ಟಿ ಲಾಡುವಿನಂತಿರಬೇಕು ಎಂದು ಸಂಘಟಕ ಗುಣ ಮಗೇಶನ್ ಅವರು ವಿಚಾರ ಗೋಷ್ಠಿಯಲ್ಲಿ ತಿಳಿಸಿದರು.

ಪುನರುಜ್ಜೀವನವನ್ನು ಸಾಧಿಸಲು ಎಲ್ಲ ಹಿಂದುಗಳು ಒಗ್ಗಟ್ಟಾಗಬೇಕು ಎಂದು ಭಾರತ ಸೇವಾಶ್ರಮದ ಸ್ವಾಮಿ ಪೂರ್ಣಾತ್ಮಾನಂದ ಅವರು ಹೇಳಿದರು. ಹಿಂದು ಧಾರ್ಮಿಕ ಬೋಧನೆಗಳು ಇಡೀ ಮಾನವ ಕುಲಕ್ಕಾಗಿ ಇವೆ ಎಂದು ಒತ್ತಿ ಹೇಳಿದ ಅವರು,ಶಾಲಾಕಾಲೇಜುಗಳಲ್ಲಿ ಹಿಂದು ಬೋಧನೆಗಳನ್ನು ಆರಂಭಿಸಬೇಕು ಎಂದರು.

ಹಿಂದುಗಳು ತಮ್ಮ ಪುನರುಜ್ಜೀವನಕ್ಕಾಗಿ ಮಾತ್ರವಲ್ಲ,ಇಡೀ ವಿಶ್ವದ ಪುನರುಜ್ಜೀವನಕ್ಕಾಗಿ ಸಾಮೂಹಿಕ ಚಿಂತನೆ ನಡೆಸಬೇಕಿದೆ ಎಂದು ಹಿಂದು ಧರ್ಮಾಚಾರ್ಯ ಸಭಾದ ಮಹಾ ಕಾರ್ಯದರ್ಶಿ ಸ್ವಾಮಿ ಪರಮಾತ್ಮಾನಂದ ಅವರು ಹೇಳಿದರು.

 ಹಿಂದು ಮತ್ತು ಸಿಕ್ಖರನ್ನು ಎಂದಿಗೂ ಪ್ರತ್ಯೇಕಿಸಲಾಗದು. ಸಿಕ್ಖರು ಹಿಂದುಗಳಾಗಿಯೇ ಇರಬೇಕು ಎಂದು ಗುರು ಗ್ರಂಥ ಸಾಹೇಬ್ ಹೇಳಿದೆ ಎಂದು ನಾಮದಾರಿ ಪಂಥದ ಸದ್ಗುರು ದಲೀಪ್ ಸಿಂಗ್ ತಿಳಿಸಿದರು.

ಹಿಂದುತ್ವದಲ್ಲಿನ ವೈವಿಧ್ಯಗಳು ಅದರ ಬಲವಾಗಿದೆಯೇ ಹೊರತು ದೌರ್ಬಲ್ಯವಲ್ಲ ಎಂದು ಇಸ್ಕಾನ್‌ನ ಅಕ್ಷಯ ಪಾತ್ರಾ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ ದಾಸ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News