ಅತ್ಯಾಧುನಿಕ ಕ್ಷಿಪಣಿಗಳ ಪ್ರದರ್ಶನವಿಲ್ಲ; ಆರ್ಥಿಕತೆಗೆ ಹೆಚ್ಚಿನ ಒತ್ತು

Update: 2018-09-09 17:47 GMT

ಪ್ಯಾಂಗ್‌ಯಾಂಗ್ (ಉತ್ತರ ಕೊರಿಯ), ಸೆ. 9: ರಾಷ್ಟ್ರವಾಗಿ ಸ್ಥಾಪನೆಗೊಂಡ 70ನೇ ವರ್ಷಾಚರಣೆ ಸಂದರ್ಭದಲ್ಲಿ ಉತ್ತರ ಕೊರಿಯ ರವಿವಾರ ಬೃಹತ್ ಸೇನಾ ಪ್ರದರ್ಶನ ಏರ್ಪಡಿಸಿದೆ.

ಆದಾಗ್ಯೂ, ಅದು ತನ್ನ ಅತ್ಯಾಧುನಿಕ ಕ್ಷಿಪಣಿಗಳನ್ನು ಪ್ರದರ್ಶಿಸಿಲ್ಲ ಹಾಗೂ ಪ್ರದರ್ಶನದ ಅರ್ಧದಷ್ಟು ಸಮಯವನ್ನು ದೇಶಿ ಆರ್ಥಿಕತೆಯನ್ನು ನಿರ್ಮಿಸುವ ನಾಗರಿಕ ಪ್ರಯತ್ನಗಳಿಗೆ ಮುಡುಪಾಗಿಟ್ಟಿತು.

ಆರ್ಥಿಕತೆಗೆ ನೀಡಿರುವ ಬಲವಾದ ಒತ್ತು, ಆರ್ಥಿಕ ಬೆಳವಣಿಗೆಗೆ ಆದ್ಯ ಗಮನ ನೀಡುವ ನಾಯಕ ಕಿಮ್ ಜಾಂಗ್ ಉನ್‌ರ ನೂತನ ನೀತಿಗಳನ್ನು ಪ್ರತಿಪಾದಿಸಿದೆ ಎಂದು ಹೇಳಲಾಗಿದೆ.

ಬೆಳಗ್ಗೆ ನಡೆದ ಮೆರವಣಿಗೆಯಲ್ಲಿ ಕಿಮ್ ಭಾಗವಹಿಸಿದರು. ಆದರೆ, ಅವರು ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿಲ್ಲ.

ಚೀನಾ ಸೇರಿದಂತೆ, ಉತ್ತರ ಕೊರಿಯ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಿರುವ ದೇಶಗಳ ಉನ್ನತ ಮಟ್ಟದ ನಿಯೋಗಗಳು ಈ ಸಂದರ್ಭದಲ್ಲಿ ಹಾಜರಿದ್ದವು.

ಸಂಧಿಗ್ಧ ಪರಿಸ್ಥಿತಿಯಲ್ಲಿ ಕವಾಯತು

ಉತ್ತರ ಕೊರಿಯ ಬಹುತೇಕ ಪ್ರತಿ ವರ್ಷ ಸೇನಾ ಕವಾಯತುಗಳನ್ನು ನಡೆಸಿದರೂ, ಇಂದಿನ ಕವಾಯತು ಸಂಧಿಗ್ಧ ಸಮಯದಲ್ಲಿ ನಡೆದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗಿನ ಉದ್ವಿಗ್ನತೆ ಶಮನ ಕ್ರಮಗಳನ್ನು ಸಿಂಗಾಪುರ ಶೃಂಗ ಸಮ್ಮೇಳನ ಬಳಿಕ ಕಿಮ್ ನಿಲ್ಲಿಸಿದ್ದಾರೆ. ಪರಮಾಣು ನಿಶ್ಶಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳು ಭಿನ್ನ ನಿಲುವುಗಳನ್ನು ಹೊಂದಿವೆ.

ಕಿಮ್ ಮೊದಲು ಪರಮಾಣು ನಿಶ್ಶಸ್ತ್ರೀಕರಣಕ್ಕೆ ಬದ್ಧವಾಗಬೇಕು ಎಂದು ಅಮೆರಿಕ ಹೇಳಿದರೆ, ತನ್ನ ಭದ್ರತೆಯನ್ನು ಮೊದಲು ಖಾತರಿಪಡಿಸಬೇಕು ಹಾಗೂ ಕೊರಿಯ ಯುದ್ಧವನ್ನು ಅಧಿಕೃತವಾಗಿ ಕೊನೆಗೊಳಿಸುವ ಶಾಂತಿ ಒಪ್ಪಂದಕ್ಕೆ ಮೊದಲು ಸಹಿ ಹಾಕಬೇಕು ಎಂದು ಉತ್ತರ ಕೊರಿಯ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News