ಬಾಬ್ರಿ ಮಸೀದಿ ಧ್ವಂಸ ಪ್ರಕರಣ : ವಿಚಾರಣಾ ನ್ಯಾಯಾಲಯದಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್

Update: 2018-09-10 09:56 GMT

ಹೊಸದಿಲ್ಲಿ,ಸೆ.10:ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಯಾವ ರೀತಿ ನಡೆದಿದೆ ಎಂದು ಸುಪ್ರೀಂಕೋರ್ಟ್ ಸೋಮವಾರ ವಿಚಾರಣಾ ನ್ಯಾಯಾಲಯದ ವರದಿ ಕೇಳಿದೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಎಂಎಂ ಜೋಷಿ ಹಾಗೂ ಉಮಾ ಭಾರತಿ ವಿರುದ್ಧದ ವಿಚಾರಣೆಯನ್ನು 2019ರ ಎಪ್ರಿಲ್ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಅಂತಿಮ ಗಡುವು ವಿಧಿಸಿತ್ತು.

ವಿಚಾರಣೆಯನ್ನು ಗಡುವಿನ ಒಳಗಾಗಿ ಪೂರ್ಣಗೊಳಿಸಲು ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ಸಲ್ಲಿಸುವಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ನ್ಯಾಯಾಧೀಶ ನ್ಯಾ. ಎಸ್.ಕೆ.ಯಾದವ್ ಅವರಿಗೆ ನ್ಯಾಯಮೂರ್ತಿ ಆರ್ ಎಫ್ ನಾರೀಮನ್ ಮತ್ತು ನ್ಯಾಯಮೂರ್ತಿ ಇಂಧು ಮಲ್ಹೋತ್ರಾ ನೇತೃತ್ವದ ಇಬ್ಬರು ಸದಸ್ಯರ ನ್ಯಾಯಪೀಠ ಆದೇಶ ನೀಡಿದೆ ಎಂದು ತಿಳಿದು ಬಂದಿದೆ. 

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ತನಕ ಪದೋನ್ನತಿಯನ್ನು ತಡೆ ಹಿಡಿದಿರುವ ಅಲಹಾಬಾದ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನ್ಯಾಯಮೂರ್ತಿ ಎಸ್.ಕೆ.ಯಾದವ್ ಅವರು ಸಲ್ಲಿಸಿರುವ  ಅರ್ಜಿ ಬಗ್ಗೆ  ಪ್ರತಿಕ್ರಿಯೆ ನೀಡುವಂತೆ ಉತ್ತರಪ್ರದೇಶ ಸರಕಾರಕ್ಕೆ  ಸುಪ್ರೀಂಕೋರ್ಟ್ ಸೂಚಿಸಿದ್ದು,   ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ   ಆದೇಶ ನೀಡಿದೆ.

1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಕರಸೇವಕರು, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ವಿಚಾರಣೆಗೆ 2017 ಎಪ್ರಿಲ್ 19 ರಂದು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.  ಈ ಮೊದಲು ಪ್ರಕರಣದ ವಿಚಾರಣೆ ರಾಯಬರೇಲಿಯಲ್ಲಿ ನಡೆಯುತ್ತಿತ್ತು, ಬಳಿಕ ಇದನ್ನು ಸುಪ್ರೀಂಕೋರ್ಟ್ ನ ಆದೇಶದಂತೆ ಲಕ್ನೋ ಪೀಠಕ್ಕೆ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News