ಸೌದಿ ರಾಜಕುಮಾರಿಯ ಕೋಟ್ಯಂತರ ರೂ. ಮೌಲ್ಯದ ಆಭರಣಗಳು ಕಳವು

Update: 2018-09-11 04:23 GMT

ಪ್ಯಾರಿಸ್, ಸೆ.11: ಇಲ್ಲಿನ ಐಷಾರಾಮಿ ರಿಟ್ಝ್ ಹೋಟೆಲ್‌ನಲ್ಲಿ ತಮ್ಮ 9.30 ಲಕ್ಷ ಡಾಲರ್ (ಸುಮಾರು 6.5 ಕೋಟಿ ರೂ.) ಮೌಲ್ಯದ ಚಿನ್ನಾಭರಣಗಳು ಕಳವಾಗಿವೆ ಎಂದು ಸೌದಿ ಅರೇಬಿಯಾದ ರಾಜಕುಮಾರಿ ಪ್ಯಾರಿಸ್ ಪೊಲೀಸರಿಗೆ ದೂರು ನೀಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ತಮ್ಮ ಕೊಠಡಿಯಿಂದ ಈ ಆಭರಣಗಳು ಕಳವಾಗಿವೆ. ಬಾಗಿಲು ಮುರಿದ ಯಾವುದೇ ಕುರುಹುಗಳು ಕಾಣುತ್ತಿಲ್ಲ. ಕೊಠಡಿಯ ಸೇಫ್‌ ಲಾಕರ್‌ನಲ್ಲಿ ಯಾವ ಆಭರಣವೂ ಉಳಿದಿಲ್ಲ ಎಂದು ದೂರು ನೀಡಿದ್ದಾರೆ. ಹೋಟೆಲ್ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದು ದೃಢಪಟ್ಟರೆ, ಪ್ಯಾರಿಸ್‌ನ ಹೋಟೆಲ್‌ನಲ್ಲಿ ಕಳವಾದ ಎರಡನೇ ಅತಿದೊಡ್ಡ ಕಳವು ಇದಾಗಲಿದೆ. ಕಳೆದ ಜನವರಿಯಲ್ಲಿ ಮಾರಕಾಸ್ತ್ರಗಳನ್ನು ಹೊಂದಿದ್ದ ಕಳ್ಳರು ಹೋಟೆಲ್ ಲಾಬಿಗೆ ನುಗ್ಗಿ ಪ್ರದರ್ಶನಕ್ಕೆ ಇಟ್ಟಿದ್ದ ಲಕ್ಷಾಂತರ ಡಾಲರ್ ಮೌಲ್ಯದ ನೆಕ್ಲೆಸ್‌ಗಳನ್ನು ದೋಚಿದ್ದರು. ಪೊಲೀಸರು ಹೋಟೆಲ್‌ನ ಮೂವರು ಮತ್ತು ಸ್ಕೂಟರ್‌ನಲ್ಲಿ ಪರಾರಿಯಾದ ಇಬ್ಬರನ್ನು ಹಿಡಿದು ಎಲ್ಲ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.

ಐಷಾರಾಮಿ ಹೋಟೆಲ್‌ಗಳಿರುವ ಈ ಜಾಗದಲ್ಲಿ ಸಶಸ್ತ್ರ ಕಳ್ಳರು ನಿರಂತರವಾಗಿ ಕಳ್ಳತನ ನಡೆಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಆಭರಣ ಮಳಿಗೆಯೊಂದರಿಂದ 55 ಲಕ್ಷ ಯೂರೋ ಮೌಲ್ಯದ ಎರಡು ವಜ್ರದ ಉಂಗುರಗಳನ್ನು ಕದ್ದ ಕಳ್ಳರು ನಕಲಿ ಉಂಗುರಗಳನ್ನು ಆ ಜಾಗದಲ್ಲಿ ಬಿಟ್ಟು ಹೋಗಿದ್ದರು. 2016ರ ಅಕ್ಟೋಬರ್‌ನಲ್ಲಿ ರಿಯಾಲಿಟಿ ಟಿವಿ ತಾರೆ ಕಿಮ್ ಕರ್ದಾಶಿಯನ್ ಅವರ ಲಕ್ಷಾಂತರ ಯೂರೊ ಮೌಲ್ಯದ ಚಿನ್ನಾಭರಣಗಳು ರಿಟ್ಝ್ ಹೋಟೆಲ್ ಬಳಿ ಕಳವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News