ಮೋದಿ ಸರ್ಕಾರ ಯುಪಿಎಗಿಂತ ಕಳಪೆ: ರಾಜ್‌ ಠಾಕ್ರೆ

Update: 2018-09-11 04:35 GMT

ಮುಂಬೈ, ಸೆ.11: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹಿಂದಿನ ಯುಪಿಎ ಸರ್ಕಾರಕ್ಕಿಂತ ಕಳಪೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮನವಿಯನ್ನು ಕಡೆಗಣಿಸಿ, ಬಂದ್ ಬೆಂಬಲಿಸದ ಶಿವಸೇನೆಯನ್ನು ಕೂಡಾ ತರಾಟೆಗೆ ತೆಗೆದುಕೊಂಡರು. "ಹಿಂದಿನ ಕಾಂಗ್ರೆಸ್ ಸರ್ಕಾರಕ್ಕಿಂತಲೂ ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕೆಟ್ಟದು. ಈ ಸರ್ಕಾರದಲ್ಲೂ ಮೋದಿ- ಶಾ ಜೋಡಿ ಮತ್ತೂ ಕೆಟ್ಟವರು" ಎಂದು ಠಾಕ್ರೆ ಬಣ್ಣಿಸಿದರು.

ಇತರ ಪಕ್ಷಗಳಿಗಿಂತ ತಾನು ಭಿನ್ನ ಎಂದು ಬಿಜೆಪಿ ಹೇಳಿಕೊಳ್ಳುತ್ತಿರುವುದು ಶುದ್ಧ ಸುಳ್ಳು ಎಂದು ಅವರು ಹೇಳಿದರು.

"ಎಲ್ಲ ಬಗೆಯ ಸುಳ್ಳು ಹರಡುವುದು ಬಿಜೆಪಿಯ ಚಟ. ನೀರಿನ ಬವಣೆ ನೀಗಿಸುವ ಸಲುವಾಗಿ 1.20 ಲಕ್ಷ ಕೊಳವೆಬಾವಿ ಕೊರೆದಿದ್ದಾಗಿ ಮಹಾರಾಷ್ಟ್ರ ಸರ್ಕಾರ ಹೇಳುತ್ತಿದೆ. ಜತೆಗೆ ರಾಜ್ಯವನ್ನು ಬಯಲು ಶೌಚಮುಕ್ತ ಎಂದು ಹೇಳಿಕೊಳ್ಳುತ್ತಿದೆ. ಇವೆಲ್ಲ ಸುಳ್ಳು" ಎಂದು ವಿಶ್ಲೇಷಿಸಿದರು.

ತೈಲ ಬೆಲೆ ಇಳಿಕೆ ಸರ್ಕಾರದ ಕೈಯಲ್ಲಿಲ್ಲ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, "ಹಾಗಾದರೆ ರಾಜಸ್ಥಾನದ ಬಿಜೆಪಿ ಸರ್ಕಾರ ಬೆಲೆ ಇಳಿಸಿದ್ದು ಹೇಗೆ? ಪ್ರಸಾದ್ ಹೇಳಿರುವುದು ಸರಿಯಾದರೆ, 2014ರ ಚುನಾವಣೆಗೆ ಮುನ್ನ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಅವರು ಹಾಗೂ ಅವರ ಪಕ್ಷ ಪ್ರತಿಭಟನೆ ನಡೆಸಿದ್ದೇಕೆ" ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News