ಅಜ್ಮಾನ್: ತುಂಬೆ ಫಿಸಿಕಲ್ ಥೆರಪಿ, ರಿಹ್ಯಾಬಿಲಿಟೇಶನ್, ಡೆಂಟಲ್ ಆಸ್ಪತ್ರೆ ಉದ್ಘಾಟನೆ

Update: 2018-09-11 13:28 GMT

ಅಜ್ಮಾನ್, ಸೆ.11: ಅಜ್ಮಾನ್ ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ ಹಾಗೂ ತುಂಬೆ ಡೆಂಟಲ್ ಆಸ್ಪತ್ರೆಯನ್ನು ಯುಎಇ ಸುಪ್ರೀಂ ಕೌನ್ಸಿಲ್‌ನ ಸದಸ್ಯ ಮತ್ತು ಅಜ್ಮಾನ್ ದೊರೆ ಶೇಕ್ ಹುಮೈದ್ ಬಿನ್ ರಶೀದ್ ಅಲ್ ನುಐಮಿ ಅವರು ಮಂಗಳವಾರ ಅಧಿಕೃತವಾಗಿ ಉದ್ಘಾಟಿಸಿದರು.

ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ ಅಜ್ಮಾನ್ ನ ಅತೀ ದೊಡ್ಡ ಪುನರ್ವಸತಿ ಆಸ್ಪತ್ರೆಯಾಗಿದ್ದರೆ ತುಂಬೆ ಡೆಂಟಲ್ ಆಸ್ಪತ್ರೆ ದೇಶದ ಮೊಟ್ಟಮೊದಲ ಖಾಸಗಿ ದಂತ ಚಿಕಿತ್ಸೆ ಆಸ್ಪತ್ರೆಯಾಗಿದೆ ಮತ್ತು ಮಧ್ಯ ಪ್ರಾಚ್ಯದಲ್ಲೇ ಖಾಸಗಿ ಕ್ಷೇತ್ರದ ಅತೀ ದೊಡ್ಡ ಶೈಕ್ಷಣಿಕ ಡೆಂಟಲ್ ಆಸ್ಪತ್ರೆಯಾಗಿದೆ.

ತುಂಬೆ ಮೆಡಿಸಿಟಿಯಲ್ಲಿ ನಡೆದ ಈ ಸಮಾರಂಭದಲ್ಲಿ ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಹಿದೀನ್ ಉಪಸ್ಥಿತರಿದ್ದರು. ತುಂಬೆ ಮೆಡಿಸಿಟಿಗೆ ಪ್ರತಿದಿನ 20,000 ಜನರು ಭೇಟಿ ನೀಡುತ್ತಿದ್ದು ಎಲ್ಲರಿಗೂ ಅಪೂರ್ವ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಸೌಲಭ್ಯವನ್ನು ಒದಗಿಸುತ್ತದೆ.

ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ, ಇಟಲಿಯ ರಿಹ್ಯಾಬಿಲಿಟೇಶನ್ ಮೆಡಿಸಿನ್ ಇಲಾಖೆಯ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ವಿಲ್ಲ ಬೆರೆಟ್ಟ ರಿಹ್ಯಾಬಿಲಿಟೇಶನ್ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯಾಚರಿಸಲಿದೆ. ಮೂರು ಅಂತಸ್ತುಗಳ ಆಸ್ಪತ್ರೆಯು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಹೈಡ್ರೊಥೆರಪಿ ಪೂಲ್, ರೊಬೊಟಿಕ್ಸ್ ಮತ್ತು ವಿಶಿಷ್ಟ ಕ್ರಯೊಥೆರಪಿ ಮುಂತಾದ ಫಿಸಿಕಲ್ ಥೆರಪಿ ವಿಭಾಗಗಳನ್ನು ಹೊಂದಿದೆ.

ಒಳರೋಗಿಗಳು ಗುಣಮುಖ ಹೊಂದುವಾಗ ಅವರಿಗೆ ಗುಣಾತ್ಮಕ ಅನುಭವ ನೀಡುವ ಸಲುವಾಗಿ ನಿರ್ಮಿಸಲಾಗಿರುವ ಥೆರಪಟಿಕ್ ಗಾರ್ಡನ್ (ಚಿಕಿತ್ಸಕ ಉದ್ಯಾನ) ಈ ಆಸ್ಪತ್ರೆಯ ವಿಶೇಷತೆಗಳಲ್ಲಿ ಒಂದಾಗಿದೆ. ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ನ್ಯೂರೊಕೊಗ್ನಿಟಿವ್ ರಿಹ್ಯಾಬಿಲಿಟೇಶನ್, ಸ್ಪೋರ್ಟ್ಸ್ ಮೆಡಿಸಿನ್ ಮತ್ತು ಓರ್ಥೊಪಿಡಿಕ್ ಮೆಡಿಸಿನ್ ನೀಡಲಾಗುತ್ತದೆ.

ಮೂರು ಅಂತಸ್ತುಗಳ, 37,000 ಚ.ಅಡಿಯ ತುಂಬೆ ಡೆಂಟಲ್ ಆಸ್ಪತ್ರೆಯಲ್ಲಿ 60 ಡೆಂಟಲ್ ಚೇರ್‌ಗಳಿವೆ. ಇಲ್ಲಿ ಅತ್ಯುನ್ನತ ಮಟ್ಟದ ದಂತ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಜೊತೆಗೆ ಇಲ್ಲಿ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಡೆಂಟಿಸ್ಟ್ರಿ ಕಾಲೇಜಿನ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News