ಆಧಾರ್ ಸಾಫ್ಟ್‌ವೇರ್ ಹ್ಯಾಕ್: ಕೇವಲ 2,500 ರೂ.ಗೆ ಹ್ಯಾಕಿಂಗ್ ತಂತ್ರಾಂಶ ಲಭ್ಯ; ವರದಿ

Update: 2018-09-11 15:00 GMT

ಹೊಸದಿಲ್ಲಿ, ಸೆ.11: ಆಧಾರ್ ದತ್ತಾಂಶಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಆಧಾರ್ ಅನುಷ್ಠಾನಕ್ಕೆ ಬಂದಂದಿನಿಂದಲೂ ಕೇಳಿಬರುತ್ತಲೇ ಇದೆ. ಈ ಮಧ್ಯೆ ‘ಹಫ್‌ಪೋಸ್ಟ್ ಇಂಡಿಯಾ’ ನಡೆಸಿರುವ ತನಿಖೆಯಲ್ಲಿ, ಆಧಾರ್ ಸಾಫ್ಟ್‌ವೇರ್‌ನಲ್ಲಿ ಪ್ಯಾಚ್ (ಸಾಫ್ಟ್‌ವೇರ್ ಸರಿಪಡಿಸಲು, ಅಭಿವೃದ್ಧಿಪಡಿಸಲು ಇತ್ಯಾದಿಗೆ ಬಳಸಲಾಗುವ ತಂತ್ರಾಂಶ) ಒಂದು ಪತ್ತೆಯಾಗಿದ್ದು ಇದು ಆಧಾರ್‌ಗಾಗಿ ಪಡೆದುಕೊಳ್ಳಲಾಗಿರುವ ಪ್ರಜೆಗಳ ಗುರುತನ್ನು ಹೊಂದಿರುವ ದತ್ತಾಂಶದ ಭದ್ರತೆಗೆ ಕನ್ನ ಹಾಕಿದೆ ಎಂದು ತಿಳಿಸಿದೆ.

ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಅಭಿವೃದ್ಧಿಗೊಳಿಸದ ಈ ಪ್ಯಾಚ್ ಅಧಿಕೃತ ಆಧಾರ್ ನೋಂದಣಿ ಸಾಫ್ಟ್‌ವೇರ್‌ನ ಭದ್ರತಾ ವ್ಯವಸ್ಥೆಯನ್ನು ವಿಫಲಗೊಳಿಸುವ ಮೂಲಕ ಹ್ಯಾಕರ್‌ಗಳಿಗೆ ಅನಧಿಕೃತ ಆಧಾರ್ ಸಂಖ್ಯೆಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಕೇವಲ ಒಂದು ಬಾರಿ 2,500 ರೂ. ನೀಡಿದರೆ ಈ ತಂತ್ರಾಂಶ ಲಭಿಸುತ್ತಿದ್ದು ಈಗಾಗಲೇ ದೇಶಾದ್ಯಂತ ಅನೇಕ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಈ ತಂತ್ರಾಂಶವನ್ನು ಬಳಸಲಾಗುತ್ತಿದೆ ಎಂದು ಹಫ್‌ಪೋಸ್ಟ್ ವರದಿ ತಿಳಿಸಿದೆ. ಸದ್ಯ ಆಧಾರ್ ಪ್ರಾಧಿಕಾರ ಸುರಕ್ಷತೆಯ ದೃಷ್ಟಿಯಿಂದ ಕಣ್ಪೊರೆ ಮತ್ತು ಬೆರಳಚ್ಚಿನ ಜೊತೆ ಮುಖ ಗುರುತು ಸೌಲಭ್ಯವನ್ನೂ ಪರಿಚಯಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಹಫ್‌ಪೋಸ್ಟ್ ಬಹಿರಂಗ ಮಾಡಿರುವ ವರದಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆಧಾರ್ ಸಾಫ್ಟ್‌ವೇರ್ ಪ್ಯಾಚನ್ನು ಪಡೆದುಕೊಂಡಿರುವುದಾಗಿ ಹಫ್‌ಪೋಸ್ಟ್ ತಿಳಿಸಿದ್ದು ಅದನ್ನು ತಜ್ಞರ ತಂಡದಿಂದ ಪರಿಶೀಲನೆಗೊಳಪಡಿಸಿದೆ. ಈ ಪ್ಯಾಚ್ ಆಧಾರ್ ನೋಂದಣಿ ಸಾಫ್ಟ್‌ವೇರ್‌ನಲ್ಲಿ ಮೊದಲೇ ಅಳವಡಿಸಲಾಗಿರುವ ಜಿಪಿಎಸ್ ವ್ಯವಸ್ಥೆಯನ್ನು ಕಡಿದು ಹಾಕುವ ಮೂಲಕ ನೋಂದಣಿ ಕೇಂದ್ರವಿರುವ ಪ್ರದೇಶದ ಮಾಹಿತಿ ಆಧಾರ್ ಪ್ರಾಧಿಕಾರಕ್ಕೆ ಸಿಗದಂತೆ ಮಾಡುತ್ತದೆ. ಇದರಿಂದಾಗಿ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ಆಧಾರ್ ಸಂಖ್ಯೆಯನ್ನು ಪಡೆಯಬಹುದಾಗಿದೆ. ಜೊತೆಗೆ ಈ ತಂತ್ರಾಂಶವು ನೋಂದಣಿ ಸಾಫ್ಟ್‌ವೇರ್‌ನ ಕಣ್ಪೊರೆ ಗುರುತು ವ್ಯವಸ್ಥೆಯನ್ನು ದುರ್ಬಲಗೊಳಿಸುವುದರಿಂದ ಪ್ರಮಾಣೀಕರಣಕ್ಕೆ ನೋಂದಾಯಿತ ವ್ಯಕ್ತಿಯ ಕೇವಲ ಭಾವಚಿತ್ರ ಇದ್ದರೆ ಸಾಕಾಗುತ್ತದೆ ಎಂದು ಹಫ್‌ಪೋಸ್ಟ್ ತಿಳಿಸಿದೆ. ಆಧಾರ್ ಸಾಫ್ಟ್‌ವೇರ್ ಹ್ಯಾಕ್ ಮಾಡಬೇಕು ಎಂಬ ಉದ್ದೇಶ ಹೊಂದಿರುವವರೇ ಈ ಪ್ಯಾಚನ್ನು ಸೃಷ್ಟಿಸಿದ್ದಾರೆ ಎಂದು ಆ್ಯಕ್ಸೆಸ್ ನೌನ ಮುಖ್ಯ ತಂತ್ರಜ್ಞ ಗುಸ್ತಫ್ ಜೋರ್ಸನ್ ತಿಳಿಸಿದ್ದು ಈ ಪ್ಯಾಚನ್ನು 2017ರಿಂದ ಬಳಕೆ ಮಾಡಲಾಗುತ್ತಿದೆ ಎಂದು ಹಫ್‌ಪೋಸ್ಟ್‌ಗೆ ವಿವರಿಸಿದ್ದಾರೆ. ಆಧಾರ್ ವ್ಯವಸ್ಥೆಯಲ್ಲಿ ಇಂಥಹ ಒಂದು ಪ್ರಮಾದ ನಡೆದಿರುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಸುತ್ತಿರುವ ಸೂಕ್ಷ್ಮ ಮಾಹಿತಿ ಮೂಲಸೌಕರ್ಯ ರಕ್ಷಣಾ ಕೇಂದ್ರ (ಎನ್‌ಸಿಐಐಪಿಸಿ) ಈ ಕುರಿತು ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ. ಈ ವರದಿಯನ್ನು ಪ್ರಕಟಿಸುವ ಮೊದಲು ಯುಐಡಿಎಐಗೆ ಮಾಹಿತಿ ನೀಡಿದ್ದು ಪ್ರಾಧಿಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಹಫ್‌ಪೋಸ್ಟ್ ತಿಳಿಸಿದೆ.

ಹಫ್‌ಪೋಸ್ಟ್ ವರದಿ ಪ್ರಕಾರ, ಇದೊಂದು ವಿಶಿಷ್ಟ ರೀತಿಯ ಹ್ಯಾಕಿಂಗ್ ಆಗಿದೆ. ಇದರಲ್ಲಿ ಆಧಾರ್ ದತ್ತಾಂಶದಲ್ಲಿ ಸಂಗ್ರಹಿಸಲಾಗಿರುವ ಮಾಹಿತಿಗಳನ್ನು ಕಳವು ಮಾಡಲು ಸಾಧ್ಯವಿಲ್ಲ. ಆದರೆ ಈ ದತ್ತಾಂಶಕ್ಕೆ ಹೊಸ ಮಾಹಿತಿಗಳನ್ನು ಸೇರಿಸಬಹುದಾಗಿದೆ. ಆದರೂ, ಭ್ರಷ್ಟಾಚಾರ ನಿಗ್ರಹ, ಕಪ್ಪುಹಣ ತಡೆ, ವಂಚನೆ ಮತ್ತು ಕಳ್ಳತನಗಳನ್ನು ನಿಯಂತ್ರಿಸುವ ಆಧಾರ್‌ನ ಮೂಲ ಉದ್ದೇಶವನ್ನು ಇದು ವಿಫಲಗೊಳಿಸುತ್ತದೆ.

ಕೇವಲ 2,500 ರೂ.ಗೆ ಸಿಗುವ ಈ ಪ್ಯಾಚ್ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಹನ್ನೆರಡು ಸಂಖ್ಯೆಗಳ ಆಧಾರ್ ಸಂಖ್ಯೆಯನ್ನು ಪಡೆಯಬಹುದಾಗಿದೆ. ಇದರಿಂದ, ಆಧಾರ್ ದತ್ತಾಂಶ ಸುರಕ್ಷಿತವಾಗಿದೆ ಎಂಬ ಸರಕಾರದ ಘೋಷಣೆಯು ಸುಳ್ಳಾಗುವುದು ಮಾತ್ರವಲ್ಲ ದೇಶದ ಭದ್ರತಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News