ಮೋದಿ ಆಡಳಿತಾವಧಿಯಲ್ಲಿ ಎನ್‌ಪಿಎ ಮೊತ್ತ 9.17 ಲಕ್ಷ ಕೋಟಿ ರೂ.ಗೆ ಏರಿಕೆ: ಕಾಂಗ್ರೆಸ್

Update: 2018-09-11 15:04 GMT

ಹೊಸದಿಲ್ಲಿ, ಸೆ.11: ಯುಪಿಎ ಸರಕಾರದ ಆಡಳಿತಾವಧಿಯ 2006ರಿಂದ 2008ರ ಅವಧಿಯಲ್ಲಿ ಭಾರೀ ಮೊತ್ತದ ಕೆಟ್ಟ ಸಾಲ(ಮರುಪಾವತಿಯಾಗದ ಸಾಲ) ಸೃಷ್ಟಿಯಾಗಿದೆ ಎಂಬ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿಕೆಗೆ ಎದಿರೇಟು ನೀಡಿರುವ ಕಾಂಗ್ರೆಸ್, ಎನ್‌ಪಿಎ ಅವ್ಯವಸ್ಥೆಗೆ ನರೇಂದ್ರ ಮೋದಿ ಸರಕಾರವೂ ಹೊಣೆಯಾಗಿದೆ ಎಂದು ಹೇಳಿದೆ.

 2014ರಲ್ಲಿ ಯುಪಿಎ ಸರಕಾರದ ಅವಧಿ ಕೊನೆಗೊಂಡ ಸಂದರ್ಭ ಎನ್‌ಪಿಎ(ಅನುತ್ಪಾದಕ ಸಾಲ) ಮೊತ್ತ 2.83 ಲಕ್ಷ ಕೋಟಿ ರೂ. ಆಗಿದ್ದರೆ, ಎನ್‌ಡಿಎ ಆಡಳಿತಾವಧಿಯಲ್ಲಿ ಇದು 12 ಲಕ್ಷ ಕೋಟಿ ರೂ.ಗೆ ಜಿಗಿದಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಮಾರ್ಚ್ 2018ರಲ್ಲಿ ಎನ್‌ಪಿಎ 10.3 ಲಕ್ಷ ಕೋಟಿಗೆ ಹೆಚ್ಚಿದೆ ಎಂದು ಸರಕಾರ ಸಂಸತ್ತಿಗೆ ತಿಳಿಸಿದ್ದು ಈ ಮೊತ್ತ ಈಗ 12 ಲಕ್ಷ ಕೋಟಿ ರೂ.ಗೆ ತಲುಪಿದೆ. ಸರಳವಾಗಿ ಹೇಳುವುದಾದರೆ 56 ತಿಂಗಳ ಮೋದಿ ಆಡಳಿತಾವಧಿಯಲ್ಲಿ 9.17 ಲಕ್ಷ ಕೋಟಿ ರೂ. ಎನ್‌ಪಿಎ ಸೃಷ್ಟಿಯಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿದ್ದ 2.83 ಲಕ್ಷ ಕೋಟಿ ರೂ.ಗೆ ಯುಪಿಎ ಹೊಣೆ ಎಂದಾದರೆ,

 ಮೋದಿ ಸರಕಾರದ ಅವಧಿಯ 9.17 ಲಕ್ಷ ಕೋಟಿ ರೂ. ಎನ್‌ಪಿಎಗೆ ಯಾರು ಹೊಣೆ ಎಂದವರು ಪ್ರಶ್ನಿಸಿದ್ದಾರೆ. ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣ ಆರೋಪಿ ಮೆಹುಲ್ ಚೋಕ್ಸಿಯನ್ನು ಬಂಧಿಸಲು ವಿಫಲವಾಗಿರುವುದನ್ನು ಟೀಕಿಸಿರುವ ಸುರ್ಜೆವಾಲಾ, ಚೋಕ್ಸಿ ಭಾರತದಿಂದ ಪಲಾಯನ ಮಾಡಿಲ್ಲ.ಈ ಹಗರಣದಲ್ಲಿ ಭಾಗಿಯಾಗಿರುವ ಮೋದಿ ಸರಕಾರ ಅವರನ್ನು ವಿದೇಶಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News