ಅಂಗನವಾಡಿಗಳಲ್ಲಿ ಒಂದು ಕೋಟಿ ನಕಲಿ ಫಲಾನುಭವಿಗಳು: ಮೇನಕಾ ಗಾಂಧಿ

Update: 2018-09-11 16:11 GMT

ಹೊಸದಿಲ್ಲಿ, ಸೆ.11: ದೇಶಾದ್ಯಂತದ ಅಂಗನವಾಡಿಗಳಲ್ಲಿ ಸುಮಾರು ಒಂದು ಕೋಟಿ ನಕಲಿ ಫಲಾನುಭವಿಗಳು ನೋಂದಣಿಯಾಗಿದ್ದು ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗುತ್ತಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮೇನಕಾ ಗಾಂಧಿ ಮಂಗಳವಾರ ತಿಳಿಸಿದ್ದಾರೆ. ದೇಶದಲ್ಲಿ 14 ಲಕ್ಷ ಅಂಗನವಾಡಿಗಳಿದ್ದು ಆರರ ಹರೆಯದ ಕೆಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಯಂದಿರು ಸೇರಿ ಒಟ್ಟಿಗೆ ಹತ್ತು ಕೋಟಿ ಫಲಾನುಭವಿಗಳಿದ್ದಾರೆ. ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ಅವರನ್ನು ಪಟ್ಟಯಿಂದ ತೆಗೆದು ಹಾಕುವ ಕಾರ್ಯ ನಡೆಯುತ್ತಿದ್ದು ಅಧಿಕಾರಿಗಳು ಈಗಾಗಲೇ ಸುಮಾರು ಒಂದು ಕೋಟಿ ನಕಲಿ ಫಲಾನುಭವಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಗಾಂಧಿ ತಿಳಿಸಿದ್ದಾರೆ. ಅಸ್ಸಾಂನ ಅಂಗನವಾಡಿಗಳಲ್ಲಿ 14 ಲಕ್ಷ ಮಕ್ಕಳ ನಕಲಿ ಹೆಸರುಗಳು ಪತ್ತೆಯಾಗಿವೆ ಎಂದು ಕಳೆದ ತಿಂಗಳು ಮೇನಕಾ ತಿಳಿಸಿದ್ದರು. ಜೂನ್‌ನಲ್ಲಿ ಅಸ್ಸಾಂ ಸರಕಾರ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದ್ದು ನಂತರ ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿಯ ಪರಿಶೀಲನೆ ನಡೆಸಲಾಗಿತ್ತು. ಈ ವರದಿಯನ್ನು ಆಧರಿಸಿ, ಪ್ರತಿ ರಾಜ್ಯಗಳ ಅಂಗನವಾಡಿಗಳ ಪರಿಶೀಲನೆ ನಡೆಸುವಂತೆ ರಾಜ್ಯ ಸರಕಾರಗಳಿಗೆ ಸಚಿವೆ ಆದೇಶಿಸಿದ್ದರು. ಆಮೂಲಕ ನಿಜವಾಗಿಯೂ ಆಹಾರದ ಅಗತ್ಯವಿರುವ ಮಕ್ಕಳ ಸಂಖ್ಯೆಯನ್ನು ತಿಳಿಸಲು ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News