ಇನ್ನೊಂದು ಶೃಂಗಸಮ್ಮೇಳನಕ್ಕೆ ಕೋರಿಕೆ: ಟ್ರಂಪ್‌ಗೆ ಕಿಮ್‌ರಿಂದ ‘ಅತ್ಯಂತ ಸಕಾರಾತ್ಮಕ’ ಪತ್ರ

Update: 2018-09-11 16:55 GMT

ವಾಶಿಂಗ್ಟನ್, ಸೆ. 11: ಸಿಂಗಾಪುರದಲ್ಲಿ ಜೂನ್‌ನಲ್ಲಿ ನಡೆದ ಐತಿಹಾಸಿಕ ಶೃಂಗ ಸಮ್ಮೇಳನದ ಬಳಿಕ, ಇನ್ನೊಂದು ಶೃಂಗ ಸಮ್ಮೇಳನಕ್ಕೆ ಅಪೇಕ್ಷೆ ವ್ಯಕ್ತಪಡಿಸಿ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ‘ಅತ್ಯಂತ ಸಕಾರಾತ್ಮಕ’ ಪತ್ರವೊಂದನ್ನು ಬರೆದಿದ್ದಾರೆ ಎಂದು ಶ್ವೇತಭವನ ಸೋಮವಾರ ಹೇಳಿದೆ.

‘‘ಪತ್ರವನ್ನು ಅತ್ಯಂತ ಆತ್ಮೀಯವಾಗಿ ಬರೆಯಲಾಗಿದೆ, ಹಾಗೂ ಅದು ಅತ್ಯಂತ ಸಕಾರಾತ್ಮಕ ಪತ್ರವಾಗಿದೆ’’ ಎಂದು ಶ್ವೇತಭವನದ ವಕ್ತಾರೆ ಸಾರಾ ಸ್ಯಾಂಡರ್ಸ್ ಹೇಳಿದ್ದಾರೆ.

ಈ ಪತ್ರವು ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣು ಶಸ್ತ್ರಗಳಿಂದ ಮುಕ್ತಗೊಳಿಸುವ ಉತ್ತರ ಕೊರಿಯದ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

‘‘ಟ್ರಂಪ್ ಜೊತೆಗೆ ಇನ್ನೊಂದು ಶೃಂಗಸಭೆಯನ್ನು ನಿಗದಿಪಡಿಸುವುದು ಪತ್ರದ ಮೂಲ ಉದ್ದೇಶವಾಗಿದೆ. ಇದಕ್ಕೆ ನಾವು ಸಿದ್ಧರಾಗಿದ್ದೇವೆ ಹಾಗೂ ಈ ಬಗ್ಗೆ ಸಂವಹನಗಳು ನಡೆಯುತ್ತಿವೆ’’ ಎಂದು ಸುಮಾರು ಮೂರು ವಾರಗಳ ಬಳಿಕ ಶ್ವೇತಭವನದಲ್ಲಿ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಯಾಂಡರ್ಸ್ ಹೇಳಿದರು.

ಮೊದಲ ಶೃಂಗ ಸಮ್ಮೇಳನದ ಬಳಿಕ ಕೆಲವೊಂದು ಧನಾತ್ಮಕ ಬೆಳವಣಿಗೆಗಳು ನಡೆದರೂ, ನಂತರದ ದಿನಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹಳಸಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ತಿಂಗಳ ಕೊನೆಯಲ್ಲಿ ನಿಗದಿಯಾಗಿದ್ದ ಉತ್ತರ ಕೊರಿಯ ಪ್ರವಾಸವನ್ನು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ರದ್ದುಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News