ಅರ್ಜುನ ಪ್ರಶಸ್ತಿಗೆ ಅಮಿತ್ ನಾಮನಿರ್ದೇಶನ

Update: 2018-09-11 18:31 GMT

ಹೊಸದಿಲ್ಲಿ, ಸೆ.11: ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾದ ಭಾರತದ ಬಾಕ್ಸರ್ ಅಮಿತ್ ಪಾಂಗಾಲ್‌ರನ್ನು ಈ ವರ್ಷದ ಅರ್ಜುನ ಪ್ರಶಸ್ತಿಗೆ ಭಾರತದ ಬಾಕ್ಸಿಂಗ್ ಫೆಡರೇಶನ್ ಇಂದು ನಾಮನಿರ್ದೇಶನ ಮಾಡಿದೆ.

ಏಶ್ಯನ್ ಗೇಮ್ಸ್ ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಉಜ್ಬೇಕಿಸ್ತಾನದ ಹಸನ್‌ಬಾಯ್ ದಸ್ಮತೋವ್‌ರನ್ನು ಮಣಿಸಿದ ಅಮಿತ್ ಲೈಟ್ ಫ್ಲೈವೇಟ್ ವಿಭಾಗದಲ್ಲಿ(49ಕೆಜಿ) ಚಿನ್ನದ ಪದಕ ಜಯಿಸಿದ್ದಾರೆ.

ಖೇಲ್‌ರತ್ನ ಬಳಿಕ ಎರಡನೇ ಉನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿಗೆ ಸೋನಿಯಾ ಲಾಥರ್ ಹಾಗೂ ಗೌರವ್ ಬಿಧುರಿ ಬಳಿಕ ನಾಮನಿರ್ದೇಶನಗೊಂಡ ಭಾರತದ ಮೂರನೇ ಬಾಕ್ಸರ್ ಅಮಿತ್.

‘‘ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿರುವುದು ನನಗೊಂದು ಗೌರವ. ನನಗೆ ಎಷ್ಟು ಸಂತೋಷವಾಗಿದೆ ಎಂದು ವರ್ಣಿಸಲು ಸಾಧ್ಯವಿಲ್ಲ’’ ಎಂದು ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಭಾರತದ 8ನೇ ಬಾಕ್ಸರ್ ಎನಿಸಿಕೊಂಡಿದ್ದ ಅಮಿತ್ ಹೇಳಿದ್ದಾರೆ.

2012ರಲ್ಲಿ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಅಮಿತ್ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗುವುದು ಅನುಮಾನವಾಗಿದೆ.

ಹರ್ಯಾಣದ ರೋಹ್ಟಕ್‌ನ 22ರ ಹರೆಯದ ಬಾಕ್ಸರ್ ಅಮಿತ್ 2017ರ ಮೇನಲ್ಲಿ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಆನಂತರ ವಿಶ್ವ ಚಾಂಪಿಯನ್‌ಶಿಪ್‌ನ ಚೊಚ್ಚಲ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಆರು ತಿಂಗಳ ಬಳಿಕ ದಿಲ್ಲಿಯಲ್ಲಿ ನಡೆದಿದ್ದ ಇಂಡಿಯಾ ಓಪನ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಬಲ್ಗೇರಿಯದಲ್ಲಿ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಮೆಂಟ್‌ನ್ನು ಜಯಿಸಿದ್ದರು. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿವರ್ಷ ಆ.29 ರಂದು ಹಾಕಿ ದಂತಕತೆ ಮೇಜರ್ ಧ್ಯಾನ್‌ಚಂದ್ ಜನ್ಮದಿನದಂದು ನಡೆಯುತ್ತದೆ. ಆದರೆ ಈ ವರ್ಷ ಸೆ.25 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News