ಚಾರಾನಗರ ಹಿಂಸಾಚಾರ ಪ್ರಕರಣ: ಆರು ಪೊಲೀಸರಿಗೆ ನ್ಯಾಯಾಲಯದ ಸಮನ್ಸ್

Update: 2018-09-12 14:09 GMT

ಅಹ್ಮದಾಬಾದ್,ಸೆ.12: ಕಳೆದ ಜುಲೈನಲ್ಲಿ ಸಂಭವಿಸಿದ್ದ ಚಾರಾನಗರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಮಹಾನಗರ ನ್ಯಾಯಾಲಯವು ಆರು ಪೊಲೀಸರಿಗೆ ಸಮನ್ಸ್ ಹೊರಡಿಸಿದೆ.

ಚಾರಾ ಸಮುದಾಯದವರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಆರು ಪೊಲೀಸರು ತಪ್ಪೆಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದಿರುವ ನ್ಯಾಯಾಲಯವು ಅ.11ರಂದು ತನ್ನೆದುರು ಹಾಜರಾಗುವಂತೆ ಅವರಿಗೆ ನಿರ್ದೇಶ ನೀಡಿದೆ.

ಅಧಿಕೃತ ಕರ್ತವ್ಯದ ಸೋಗಿನಲ್ಲಿ ಅಪರಾಧವನ್ನೆಸಗಲು ಪೊಲೀಸ್ ಅಧಿಕಾರಿಗೆ ಅಧಿಕಾರವಿಲ್ಲ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಆರೋಪಿಗಳಲ್ಲಿ ಓರ್ವ ಜಂಟಿ ಪೊಲೀಸ್ ಆಯುಕ್ತ,ಓರ್ವ ಡಿಸಿಪಿ,ಓರ್ವ ಇನ್ಸ್‌ಪೆಕ್ಟರ್ ಮತ್ತು ಮೂವರು ಎಸ್‌ಐಗಳು ಸೇರಿದ್ದಾರೆ.

ಚಾರಾನಗರದ ನಿವಾಸಿ ಹಾಗೂ ನ್ಯಾಯವಾದಿ ಮನೋಜ ತಮಾಂಚೆ ಅವರ ದೂರಿನ ಮೇರೆಗೆ ಹೆಚ್ಚುವರಿ ಮುಖ್ಯ ಮಹಾನಗರ ನ್ಯಾಯಾಧೀಶ ನಾಸೀರ್ ಸಿದ್ದಿಕಿ ಅವರು ಈ ಸಮನ್ಸ್ ಹೊರಡಿಸಿದ್ದಾರೆ.

ಜು.26-27ರ ರಾತ್ರಿ ಚಾರಾ ಸಮುದಾಯದ ಜನರು ಮತ್ತು ಶಾರದಾನಗರ ಪೊಲೀಸ್ ಠಾಣೆಯ ಅಧಿಕಾರಿಗಳ ನಡುವೆ ಘರ್ಷಣೆಗಳು ನಡೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News