‘ದಲಿತ’ ಪದ ಉಳಿವಿಗಾಗಿ ಸುಪ್ರೀಂ ಮೊರೆ

Update: 2018-09-12 14:44 GMT

ಬೆಂಗಳೂರು, ಸೆ.12: ಕೇಂದ್ರ ಸರಕಾರವು ದಲಿತರ ಒಗ್ಗಟ್ಟು ಮುರಿಯಲು ಬಹುದೊಡ್ಡ ಹುನ್ನಾರ ನಡೆಯುಸುರುವ ಕಾರಣ, ‘ದಲಿತ' ಪದ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಅಗತ್ಯ ಇದೆ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದ್ದಾರೆ.

ಬುಧವಾರ ಗಾಂಧಿನಗರದ ಖಾಸಗಿ ಹೊಟೇಲ್‌ನಲ್ಲಿ ಸಮತಾ ಸೈನಿಕ ದಳ ಏರ್ಪಡಿಸಿದ್ದ, ‘ದಲಿತ ಪದ’ ಬಳಕೆ ವಿವಾದ ಕುರಿತ ಒಂದು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಹರಿಜನ’ ಪದ ನಿಷೇಧ ಮಾದರಿಯಲ್ಲಿಯೇ, ಇದೀಗ ದಲಿತ ಪದ ನಾಶ ಮಾಡಲು ಮನುವಾದಿ ಶಕ್ತಿಗಳು ಷಡ್ಯಂತ್ರ ರೂಪಿಸಿದ್ದಾರೆ. ಆದರೆ, ಕಾನೂನು ಹೋರಾಟದಿಂದಲೇ ಈ ಪದ ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಅಮೆರಿಕದ ಜನಾಂಗೀಯ ತಾರತಮ್ಯಕ್ಕೆ ಒಳಗಾದ ಕರಿಯರು ಸ್ಥಾಫಿಸಿದ ‘ಬ್ಲಾಕ್ ಫ್ಯಾಂಥರ್ಸ್‌’ ಶಬ್ದದ ಸ್ಪೂರ್ತಿ ಪಡೆದು ದೇಶದಲ್ಲಿ ‘ದಲಿತ ಫ್ಯಾಂಥರ್ಸ್‌’ ಸ್ಥಾಪನೆ ಮಾಡಲಾಯಿತು. 1970ರ ದಶಕದಿಂದಲೂ ದಲಿತ ಪದ ಚಾಲನೆಯಲ್ಲಿದೆ. ಅಷ್ಟೇ ಅಲ್ಲದೆ, ನೂರಾರು ಹೋರಾಟಗಳಿಗೆ ಸ್ಫೂರ್ತಿ ತುಂಬಿದೆ ಎಂದರು.

ದಲಿತ ಪದ ಬಳಕೆ ತಪ್ಪು ಎನ್ನುವ ನ್ಯಾಯಾಲಯದ ಆದೇಶವನ್ನು ವಿರೋಧಿಸುತ್ತೇವೆ. ಈ ಪದ ಬಳಕೆ ಅವಮಾನವಲ್ಲ ಎಂದ ಅವರು, ದಲಿತ ಪದ ಬಳಕೆ ಮಾಡುವುದರಿಂದ ಯಾವ ತಪ್ಪೂ ಇಲ್ಲ. ದಲಿತ ಪದ ಬಳಕೆ ಮಾಡಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ ಎಂದು ತಿಳಿಸಿದರು.

ನಿಂದನೆ ಇಲ್ಲ: ಶೋಷಿತ ಜನರನ್ನು ಹಲವು ಭಾಷೆಗಳ ಪದಗಳಲ್ಲಿ ನಿಂದನೆ ಮಾಡಲಾಗುತ್ತದೆ. ಆದರೆ, ದಲಿತ ಎನ್ನುವ ಪದದಿಂದ ನಿಂದನೆಯೇ ಇಲ್ಲ. ಇದೊಂದು ಹೋರಾಟ ಮತ್ತು ಒಗ್ಗಟ್ಟಿನ ಘೋಷಣೆಯೇ ಆಗಿದ್ದು, ಶೋಷಿತರ ಜೀವನದ ಭಾಗ ದಲಿತ ಪದ ಆಗಿದೆ ಎಂದು ಚಿಂತಕ ಡಾ.ಎಂ.ನಾರಾಯಣ ಸ್ವಾಮಿ ಹೇಳಿದರು.

ದೇಶದ ಸಂವಿಧಾನದಲ್ಲಿ ಎಲ್ಲಿಯೂ ದಲಿತ ಎಂಬ ಪದ ಬಳಕೆಯಾಗಿಲ್ಲ. ಆದ ಕಾರಣ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಪದವನ್ನು ತಮ್ಮ ಪತ್ರ ವ್ಯವಹಾರ ಗಳಲ್ಲಿ ಬಳಕೆ ಮಾಡಬಾರದೆಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಅದೇ ರೀತಿ, ಮುಂಬೈ ನ್ಯಾಯಾಲಯವು, ಮಾಧ್ಯಮಗಳಲ್ಲಿ ದಲಿತ ಪದ ಬಳಕೆ ಮಾಡಬಾರದೆಂದು ತಿಳಿಸಿದೆ. ಆದರೆ, ಈಗಾಗಲೇ ಈ ಪದ ಸಮಾಜ, ಸಾಹಿತ್ಯ, ಹೋರಾಟ ರಂಗಗಳಲ್ಲಿ ದಟ್ಟವಾಗಿ ಬೆಳೆದಿದೆ. ಇದನ್ನು ಹೇಗೆ ನಿಯಂತ್ರಣ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಸಂವಿಧಾನದ 341ನೇ ವಿಧಿಯ ಅನ್ವಯ ಪರಿಶಿಷ್ಟ ಜಾತಿಗಳನ್ನು ಅನುಬಂಧದಲ್ಲಿಡುವ ಹಾಗೂ ಅನುಸೂಚಿ ಜಾತಿಗಳು ಎಂತಲೂ ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ, ಪರ್ಯಾಯ ಪದಗಳನ್ನು ಬಳಕೆ ಮಾಡಲು ಅವಕಾಶವೂ ಇದೆ. ಹೀಗಾಗಿ, ಪ್ರಸ್ತುತ ದಲಿತ ಪದ ಬಳಕೆ ಸಂಬಂಧ ಹೊರಬಿದ್ದಿರುವ ಆದೇಶಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಬೇಕೆಂದು ತಿಳಿಸಿದರು.

ಸಂವಾದದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಅಧ್ಯಕ್ಷ ಅಂನತರಾಯಪ್ಪ, ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ.ಎಂ.ಸುಮಿತ್ರಾ, ದಲಿತ ಸಂಘರ್ಷ ಸಮಿತಿ ಮುಖಂಡ ತಿಮ್ಮಯ್ಯ, ಡಾ.ಎಚ್.ಆರ್.ಸುರೇಂದ್ರ, ಎಂ.ಶ್ರೀನಿವಾಸ್ ಸೇರಿ ಮತ್ತಿತರಿದ್ದರು.

ದಲಿತರಿಂದಲೇ ಅನ್ಯಾಯ

ದಲಿತರು ಬಂದರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ ಎಂದು ಹೇಳಿದವರಿಂದಲೇ ದಲಿತ ಸಮುದಾಯಕ್ಕೆ ಅನ್ಯಾಯವಾಗಿದ್ದು, ಕೆಲ ಸಾಹಿತಿಗಳು ದಲಿತರ ಹೆಸರಿನಲ್ಲಿ ಲಾಭ ಪಡೆಯುತ್ತಿದ್ದಾರೆ.

-ಡಾ.ಎಂ.ಸುಮಿತ್ರಾ, ಬೆಂಗಳೂರು ವಿವಿ ಕನ್ನಡ ಅಧ್ಯನ ಕೇಂದ್ರದ ಪಾಧ್ಯಾಪಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News