ಬದ್ಧತೆ ಇಲ್ಲದಿದ್ದರೆ ಕಾನೂನುಗಳೆಲ್ಲವೂ ವ್ಯರ್ಥ

Update: 2018-09-12 18:31 GMT

ಮಾನ್ಯರೇ,

ದಿಲ್ಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ದೇಶದಲ್ಲಿ ಮಹಿಳೆಯರು, ಅಪ್ರಾಪ್ತ ವಯಸ್ಕರ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಹತ್ಯೆ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸಮಾಜದಲ್ಲಿ ಗಮನಸೆಳೆಯ ತೊಡಗಿದವು. ಇದರಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ. ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ದೇಶದ ತುಂಬೆಲ್ಲಾ ನಡೆಯುವ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಂತಹ ಘನಘೋರ ಕೃತ್ಯಗಳ ವಿರುದ್ಧ ಇಡೀ ದೇಶದಲ್ಲಿ ಜಾಗೃತಿ ಮೂಡಿವೆ.

ಪ್ರಪಂಚದಲ್ಲಿ ಮುಂದುವರಿದ ದೇಶಗಳು ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲೂ ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ. ಅದರೆ ಭಾರತ ವಿಶ್ವದ ಅತ್ಯಾಚಾರ ಪ್ರಕರಣಗಳಲ್ಲಿ ಟಾಪ್ 10ರೊಳಗೆ ಗುರುತಿಸಿಕೊಂಡಿದ್ದು ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಬಿಂಬಿಸಿದೆ. ನ್ಯಾಷನಲ್ ಕ್ರೈಮ್ ಬ್ಯುರೊ ರೆಕಾರ್ಡ್ ಪ್ರಕಾರ ಎರಡು ವರ್ಷಗಳ ಹಿಂದೆ ದೇಶಾದ್ಯಂತ 38,947 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಅದರಲ್ಲೂ ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ, ಹತ್ಯೆಗಳಂತಹ ಹೇಯ ಕೃತ್ಯಗಳು ದೇಶವಾಸಿಗಳನ್ನು ಆಘಾತಗೊಳಿಸಿವೆ.

ಕಥುವಾ, ಉನ್ನಾವೊ ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಇಂತಹ ಅಪರಾಧ ಕೃತ್ಯಗಳ ತಡೆಗೆ ಕಠಿಣ ಕಾನೂನು ತರುವ ಚಿಂತನೆಯತ್ತ ಹೊರಡಿಸಿದವು. ಇದೀಗ ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಗಲ್ಲು ಶಿಕ್ಷೆ ನೀಡುವ ವಿಧೇಯಕವನ್ನು ಸಂಸತ್‌ನಲ್ಲಿ ಪಾಸ್ ಮಾಡಲಾಗಿದೆ. ಇದು ಕಾನೂನಾಗಿ ರೂಪುಗೊಂಡು ಪೈಶಾಚಿಕ ಕೃತ್ಯ ಎಸಗಿದವರಿಗೆ ಗಲ್ಲುಗಂಬಕ್ಕೆ ಕೊಂಡೊಯ್ಯಲಿದೆ. ಇದಕ್ಕೂ ಮುನ್ನ ಅತ್ಯಾಚಾರ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳುವ ಪೊಕ್ಸೊ ಕಾಯ್ದೆ ಸೇರಿದಂತೆ ಹಲವು ಕಾನೂನುಗಳು ಜಾರಿಯಲ್ಲಿವೆ. ಆದರೆ ಎಂತಹ ಕಠಿಣ ಕಾನೂನನ್ನು ತಂದರೂ ಜಾರಿ ಮಾಡುವವರಿಗೆ ಬದ್ಧತೆ, ಇಚ್ಛಾಶಕ್ತಿ ಇಲ್ಲದಿದ್ದರೆ ಎಲ್ಲಾ ಕಾನೂನುಗಳು ವ್ಯರ್ಥ.

-ಅರ್ಪಿತಾ ವಿ. ರಾವ್, ಎಚ್. ಡಿ. ಕೋಟೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News