ಮಲ್ಯ 'ಗ್ರೇಟ್ ಎಸ್ಕೇಪ್' ಹಿಂದೆ ಪ್ರಧಾನಿ ಪಾತ್ರ: ರಾಹುಲ್ ಗಾಂಧಿ

Update: 2018-09-14 10:01 GMT

ಹೊಸದಿಲ್ಲಿ, ಸೆ. 14: ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಸಾಲ ಬಾಕಿಯಿರಿಸಿ ದೇಶ ಬಿಟ್ಟು ಪಲಾಯನಗೈದಿರುವ ಮದ್ಯ ದೊರೆ ವಿಜಯ್ ಮಲ್ಯ ಅವರ 'ಗ್ರೇಟ್ ಎಸ್ಕೇಪ್' ಹಿಂದೆ ಪ್ರಧಾನಿ ನರೇಂದ್ರ ಮೋದಿಯ ಪಾತ್ರವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ಟ್ವೀಟ್ ಮಾಡಿದ ರಾಹುಲ್ ''ಸಿಬಿಐ ಮೌನವಾಗಿ 'ಬಂಧನ' ನೋಟಿಸ್ ಅನ್ನು 'ಮಾಹಿತಿ ನೀಡಿ' ಎಂದು ತಿದ್ದುಪಡಿಗೊಳಿಸಿ ಮಲ್ಯರ ಗ್ರೇಟ್ ಎಸ್ಕೇಪ್ ಗೆ ಸಹಾಯ ಮಾಡಿದೆ. ಸಿಬಿಐ ನೇರವಾಗಿ ಪ್ರಧಾನಿಗೆ ವರದಿ ಸಲ್ಲಿಸುತ್ತದೆ. ಇಂತಹ ಒಂದು ಮಹತ್ವದ ಹಾಗೂ ವಿವಾದಾತ್ಮಕ ಪ್ರಕರಣದಲ್ಲಿ  ಪ್ರಧಾನಿಯ ಅನುಮತಿಯಿಲ್ಲದೆ ಲುಕೌಟ್ ನೋಡಿಸ್ ನಲ್ಲಿ ಬದಲಾವಣೆ ಸಾಧ್ಯವಿಲ್ಲ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ವಿತ್ತ ಸಚಿವ ಜೇಟ್ಲಿ ವಿರುದ್ಧವೂ ಕಿಡಿ ಕಾರಿದ ರಾಹುಲ್ ''ಮಲ್ಯ ಲಂಡನ್ ಗೆ ತೆರಳುತ್ತಿರುವುದಾಗಿ ತಮ್ಮಲ್ಲಿ ಹೇಳಿದ್ದರೆಂದು ಎರಡೂವರೆ ವರ್ಷಗಳ ಕಾಲ ಸಾರ್ವಜನಿಕರಿಂದ ಹಾಗೂ ತನಿಖಾ ಏಜನ್ಸಿಗಳಿಂದ ಮುಚ್ಚಿಟ್ಟಿದ್ದ ಜೇಟ್ಲಿಯವರಿಗೆ ಈಗ ಅದು ಒಮ್ಮೆಗೇ ನೆನಪಾಗಿದೆ. ಅವರು ವಿತ್ತ ಸಚಿವರಾಗಿ ಮುಂದುವರಿಯುವುದು ಸರಿಯಲ್ಲ ಎನ್ನುವುದಕ್ಕೆ ಇದೊಂದೇ ಸಾಕು'' ಎಂದೂ ಟ್ವೀಟ್ ಮಾಡಿದ್ದಾರೆ.

ಬ್ಯಾಂಕುಗಳಿಂದ ಪಡೆದ ಸಾಲ ಮರುಪಾವತಿ ಸಂಬಂಧ ಒಂದು ನಿರ್ಣಯಕ್ಕೆ ಬರಲು ತಾನು ವಿತ್ತ ಸಚಿವರನ್ನು ಭೇಟಿಯಾಗಿದ್ದಾಗಿ ಮಲ್ಯ ಹೇಳಿಕೊಂಡಿದ್ದರೆ ಇದು ಸುಳ್ಳು ಎಂದಿರುವ ಜೇಟ್ಲಿ  ರಾಜ್ಯಸಭಾ ಸಂಸದರಾಗಿದ್ದ ಮಲ್ಯ ಸಂಸತ್ತಿನಲ್ಲಿ ತಮ್ಮನ್ನು ಮಾತನಾಡಿಸಿದ್ದರು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News