ಕಿಂಗ್‌ಪಿನ್‌ಗಳ ಹಿನ್ನೆಲೆ ನನಗೆ ಗೊತ್ತು: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-14 12:28 GMT

ಬೆಂಗಳೂರು, ಸೆ.14: ರಾಜ್ಯದ ಸಮ್ಮಿಶ್ರ ಸರಕಾರ ಬೀಳಿಸಲು ಬಿಜೆಪಿ ವ್ಯರ್ಥ ಕಸರತ್ತು ಮಾಡುತ್ತಿದೆ. ಇದಕ್ಕಾಗಿ ಯಾರಿಂದ ಯಾರು ಹಣ ಸಂಗ್ರಹಿಸುತ್ತಿದ್ದಾರೆ. ಇದರ ಹಿಂದಿರುವ ಕಿಂಗ್‌ಪಿನ್‌ಗಳು ಯಾರು, ಅವರ ಹಿನ್ನೆಲೆ ಏನು ಎಲ್ಲ ಮಾಹಿತಿಯೂ ನನ್ನ ಬಳಿಯಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ಸಕಲೇಶಪುರದ ಕಾಫಿ ಪ್ಲಾಂಟರ್ ಒಬ್ಬರು ರೆಸಾರ್ಟ್ ಮಾಡಲು ಹೋಗಿದ್ದರು. ತನ್ನ ಹೆಂಡತಿ ಹಾಗೂ ಜನ್ಮ ಕೊಟ್ಟ ಮಗುವನ್ನು ಕೊಂದ ಅವರು ಈಗ ಜೈಲಿನಲ್ಲಿದ್ದಾರೆ. ಅದಕ್ಕೆ ಕಾರಣವಾದವರು ಯಾರು ಅನ್ನೋದು ಗೊತ್ತಿದೆ ಎಂದರು.

2010ರಲ್ಲಿ ಬಿಬಿಎಂಪಿ ಕಡತಗಳ ಕಚೇರಿಗೆ ಬೆಂಕಿ ಇಟ್ಟವರು ಯಾರು? ಅದರ ಹಿಂದೆ ಇರುವ ಕಿಂಗ್‌ಪಿನ್ ಯಾರು? ಯಾರ ಜೊತೆ ಸೇರಿ ಸರಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇಸ್ಪೀಟ್ ದಂಧೆಯಲ್ಲಿ ಕೋಟ್ಯಂತರ ರೂ.ಸಂಗ್ರಹಿಸಿದ್ದಾರೆ. ಸರಕಾರ ಬೀಳಿಸಲು ಆ ಹಣವನ್ನು ಬಳಕೆ ಮಾಡುತ್ತಿದ್ದಾರೆ. ಈ ಎಲ್ಲ ಮಾಹಿತಿಗಳು ನನ್ನ ಬಳಿ ಇದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿಯವರು ಅವರ ಕೆಲಸ ಮಾಡಲಿ, ನಾನು ಯಾವುದಕ್ಕೂ ತಲೆ ಕಡೆಸಿಕೊಳ್ಳುವುದಿಲ್ಲ, ಆರಾಮಾಗಿದ್ದೇನೆ. ಶಾಸಕರಿಗೆ ಹಣದ ಆಮಿಷ ಒಡ್ಡುತ್ತಿರುವುದು ಗೊತ್ತಿದೆ. ನಾನು ಸುಮ್ಮನೆ ಕೂತಿಲ್ಲ. ಸರಕಾರವನ್ನು ಬೀಳಿಸಲು ಯಾರು ಯಾರು ಕಿಂಗ್‌ಪಿನ್‌ಗಳು ಕೆಲಸ ಮಾಡುತ್ತಿದ್ದಾರೆ. ಯಾರಿಂದ ಹೇಗೆ ಹಣ ಸಂಗ್ರಹ ಮಾಡುತ್ತಿದ್ದಾರೆ ಎಲ್ಲವೂ ಗೊತ್ತು ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯ ಸರಕಾರವನ್ನು ಬೀಳಿಸಲು ಪದೇ ಪದೇ ಡೆಡ್‌ಲೈನ್‌ಗಳು ಮಾಧ್ಯಮಗಳಲ್ಲಿ ಬರುತ್ತಿದೆ. ಸೋಮವಾರದ ಡೆಡ್‌ಲೈನ್ ಮುಗಿಯಿತು, ಗಣೇಶ ಹಬ್ಬದ ಡೆಡ್‌ಲೈನ್ ಕೂಡ ಮುಗಿಯಿತು. ಈಗ ಬಹುಷ ಅಕ್ಟೋಬರ್ 2, ನಂತರ ದಸರಾ, ಆಮೇಲೆ ಪಂಚಾಂಗ ನೋಡಿಕೊಂಡು ಬೇರೆ ಮುಹೂರ್ತ ನಿಗದಿ ಮಾಡುತ್ತಾರೇನೋ ಎಂದು ಅವರು ವ್ಯಂಗ್ಯವಾಡಿದರು.

ಸರಕಾರ ಅಸ್ಥಿರವಾಗಲಿದೆ ಎಂಬ ಅಸಡ್ಡೆ ಸರಕಾರಿ ಅಧಿಕಾರಿಗಳಲ್ಲಿ ಮೂಡುತ್ತಿದೆ. ಅವರಿಗೆ ಚಾಟಿ ಬೀಸಬೇಕಿದೆ. ಆದುದರಿಂದ, ಸೋಮವಾರದಿಂದ ಅಧಿಕಾರಿಗಳ ಸಭೆ ಕರೆಯುತ್ತಿದ್ದೇನೆ. ಇನ್ನೂ ಕಠಿಣವಾಗಿ ಮುಂದುವರೆಯಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ಪಕ್ಷ ಹಾಗೂ ಯಡಿಯೂರಪ್ಪಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ಈ ಸರಕಾರವನ್ನು ಹೇಗೆ ಬೀಳಿಸಬೇಕು ಎಂಬ ಚಿಂತನೆ ಮಾತ್ರ ಅವರನ್ನು ಆವರಿಸಿಕೊಂಡಿದೆ. ಬಿಜೆಪಿಯವರು ರೆಸಾರ್ಟ್, ಗುಡಿಸಲು ಏನನ್ನಾದರೂ ಸಿದ್ಧಮಾಡಿಕೊಳ್ಳಲಿ, ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದು ಅವರು ಹೇಳಿದರು.

ಬಿಜೆಪಿ ಕೆಲ ಶಾಸಕರು ನನ್ನ ಜೊತೆ ಹಳೆಯ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಹಿಂದೆ ಅವರ ಜೊತೆ ಸೇರಿ ಸರಕಾರ ಮಾಡಿದ್ದೇನೆ. ನಾನು ಮೈಸೂರು ಭಾಗದ ಬಿಜೆಪಿ ಶಾಸಕರನ್ನು ಮುಟ್ಟುವುದಿಲ್ಲ. ಅವರನ್ನು ಯಾಕೆ ಈ ವಿಚಾರದಲ್ಲಿ ಎಳೆದು ತರುತ್ತಿದ್ದೀರಾ? ಮಾಧ್ಯಮದವರ ಬಳಿ ಇರುವ ಶಾಸಕರ ಪಟ್ಟಿಯೇ ಬೇರೆ, ನಮ್ಮ ಬಳಿ ಇರುವ ಪಟ್ಟಿಯೇ ಬೇರೆ ಎಂದು ಕುಮಾರಸ್ವಾಮಿ ಹೇಳಿದರು.

ನನಗೆ ರಾಜ್ಯದ ಅಭಿವೃದ್ಧಿ ಮುಖ್ಯ. ನಾನು ಜನರ ಕೆಲಸ ಮಾಡಬೇಕು. ಬಿಜೆಪಿಯವರು ಮಾಡುತ್ತಿರುವ ಕೆಲಸವನ್ನು ನಾನೇಕೆ ಮಾಡಲಿ, ಸರಕಾರ ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಅದಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಮಾರ್ಮಿಕವಾಗಿ ನುಡಿದರು.

ನಾಳೆ ಬೆಳಗಾವಿಗೆ ಹೋಗುತ್ತಿದ್ದೇನೆ. ರಾಷ್ಟ್ರಪತಿಯವರ ಸಭೆಯಲ್ಲಿ ಭಾಗವಹಿಸಿ, ನಂತರ ಜನತೆಯ ಕಷ್ಟ ಸುಖ ಆಲಿಸಲು ಜನತಾ ದರ್ಶನ ಏರ್ಪಡಿಸಿದ್ದೇನೆ. ಅದನ್ನು ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತೇನೆ. ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲ ಸಚಿವರು ನನ್ನ ಜೊತೆಯಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News