ಬಿಜೆಪಿ ವಿರುದ್ಧ ಎಸಿಬಿಗೆ ದೂರು ನೀಡಲು ನಿರ್ಧಾರ: ಡಿಸಿಎಂ ಡಾ.ಜಿ ಪರಮೇಶ್ವರ್

Update: 2018-09-14 13:09 GMT

ಬೆಂಗಳೂರು, ಸೆ. 14: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ಕೆಲ ಗೊಂದಲವಿದ್ದರೂ ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಬೀಳುವ ಮಟ್ಟಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಸದಾಶಿವನಗರದಲ್ಲಿನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಆಂತರಿಕ ಅಸಮಾಧಾನವೇನಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವರು ಹೇಳಿದ್ದಾರೆ. ಹೊಗೆ ಆಡಿದ ತಕ್ಷಣವೇ ಅನಾಹುತ ಅಂದರೆ ಹೇಗೆ? ತಾವೆಲ್ಲ ತಿಳಿದಿರುವಂತೆ ಗಂಭೀರ ಸಮಸ್ಯೆ ಏನೂ ಇಲ್ಲ, ಸರಕಾರ ಸುಭದ್ರವಾಗಿದೆ ಎಂದರು.

ಎಸಿಬಿಗೆ ದೂರು: ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ಲಂಚ ಆಮಿಷದ ವಿಚಾರವಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಲು ನಿರ್ಧರಿಸಿದ್ದೇವೆ. ಮಾಧ್ಯಮಗಳಲ್ಲೂ ಈ ಸುದ್ದಿ ಬರುತ್ತಿದೆ. ಅದರ ಆಧಾರದ ಮೇಲೆಯೇ ದೂರು ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

‘ಬಿಜೆಪಿ ನಾಯಕರಿಗೆ ಇಷ್ಟರಲ್ಲೇ ಸಿಹಿ ಸುದ್ದಿ’ ಎಂಬ ವಿಪಕ್ಷ ನಾಯಕ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರಿಗೆ ಸಿಹಿ ಸಿಕ್ಕಿದ್ದರೆ ತಿಂದುಕೊಳ್ಳಲಿ ಬಿಡಿ ಎಂದು ಲೇವಡಿ ಮಾಡಿದರು.

ಬೆಳಗಾವಿ ರಾಜಕಾರಣ ಆಂತರಿಕವಾದದ್ದು. ಡಿಕೆಶಿ, ನೀರಾವರಿ ಸಚಿವರಾಗಿರುವುದರಿಂದ ಎಲ್ಲ ಭಾಗಗಳಿಗೆ ಭೇಟಿ ಕೊಡುತ್ತಾರೆ. ಇದನ್ನೇ ಹಸ್ತಕ್ಷೇಪ ಎಂದರೆ ಹೇಗೆ? ಎಂದು ಪ್ರಶ್ನಿಸಿದರು, ಪಕ್ಷದ ಕಚೇರಿ ನಿರ್ಮಾಣವನ್ನೂ ಶಿವಕುಮಾರ್ ಅವರಿಗೆ ಒಪ್ಪಿಸಿದ್ದೇವೆ. ಹೀಗಾಗಿ ಬೆಳಗಾವಿಗೆ ಹೋಗಿಬಂದಿದ್ದರು ಎಂದ ಅವರು, ಮಾಧ್ಯಮಗಳಲ್ಲಿನ ಊಹಾಪೋಹದ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಇದೇ ವೇಳೆ ಪ್ರತಿಕ್ರಿಯೆ ನೀಡಿದರು.

‘ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಯಲ್ಲಿದೆ. ಯಾರನ್ನು ಮಂತ್ರಿ ಮಾಡಬೇಕು, ಯಾವ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂಬ ಚರ್ಚೆ ನಡೆದಿದೆ. ವಿದೇಶಿ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಕ್ಕೆ ಹಿಂದಿರುಗಿದ ಕೂಡಲೇ ತೀರ್ಮಾನಿಸಲಾಗುವುದು’

-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News