ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್: ಗುರುಪ್ರೀತ್ ಸಿಂಗ್‌ಗೆ ಬೆಳ್ಳಿ

Update: 2018-09-14 18:21 GMT

ಚಾಂಗ್ವಾನ್, ಸೆ.14: ಪುರುಷರ ಸ್ಟಾಂಡರ್ಡ್ ಪಿಸ್ತೂಲ್ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಇದೇ ವೇಳೆ, ಭಾರತದ ಜೂನಿಯರ್ ಶೂಟರ್‌ಗಳು ಎರಡು ಚಿನ್ನದ ಪದಕವನ್ನು ಜಯಿಸುವುದರೊಂದಿಗೆ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ಕಾಯ್ದುಕೊಂಡರು.

ಪ್ರತಿಷ್ಠಿತ ಐಎಸ್‌ಎಸ್‌ಎಫ್ ಚಾಂಪಿಯನ್‌ಶಿಪ್‌ನ ಕೊನೆಯ ದಿನವಾದ ಶುಕ್ರವಾರ ಜೂನಿಯರ್ ವಿಭಾಗದಲ್ಲಿ ವಿಜಯ್‌ವೀರ್ ಸಿಧು(16 ವರ್ಷ)25 ಮೀ.ಸ್ಟಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಆ ಬಳಿಕ ರಾಜ್‌ಕನ್ವರ್ ಸಿಂಗ್ ಸಂಧು ಹಾಗೂ ಆದರ್ಶ್ ಸಿಂಗ್ ಜತೆಗೂಡಿ ಟೀಮ್ ಸ್ಪರ್ಧೆಯಲ್ಲಿ ಮತ್ತೊಂದು ಚಿನ್ನ ತನ್ನದಾಗಿಸಿಕೊಂಡರು. ಭಾರತ 11 ಚಿನ್ನ, 9 ಬೆಳ್ಳಿ ಹಾಗೂ 7 ಕಂಚಿನ ಪದಕ ಸಹಿತ ಒಟ್ಟು 27 ಪದಕಗಳನ್ನು ಜಯಿಸುವುದರೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದೆ.

ಗುರುವಾರ 25 ಮೀ.ಪಿಸ್ತೂಲ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ವಿಜಯ್‌ವೀರ್ ಸಿಧು ವೈಯಕ್ತಿಕ ವಿಭಾಗದಲ್ಲಿ ಒಟ್ಟು 572 ಅಂಕ ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಕೊರಿಯಾದ ಲೀ ಗುನ್ಹೆಯೊಕ್(570) ಹಾಗೂ ಚೀನಾದ ಹೊಜಿ ಝು(572) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಟೀಮ್ ಸ್ಪರ್ಧೆಯಲ್ಲಿ ಸಿಧು, ಸಂಧು(564) ಹಾಗೂ ಸಿಂಗ್(559)ಒಟ್ಟು 1,695 ಅಂಕ ಗಳಿಸಿ ಅಗ್ರ ಸ್ಥಾನ ಪಡೆದರು. ಕೊರಿಯಾ(1693) ಹಾಗೂ ಝೆಕ್ ಗಣರಾಜ್ಯ(1674)ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡವು. ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಗುರುಪ್ರೀತ್ ಸಿಂಗ್ 579 ಅಂಕ ಗಳಿಸಿ ಬೆಳ್ಳಿ ನಗೆ ಬೀರಿದರು. ಉಕ್ರೇನ್‌ನ ಪಾವ್ಲೊ ಕೊರೊಸ್ಟೈಲೊ (581) ಮೊದಲ ಸ್ಥಾನ ಪಡೆದರು. ಕೊರಿಯಾದ ಕಿಮ್ ಜುನ್‌ಹೊಂಗ್ ಕಂಚಿನ ಪದಕ ಜಯಿಸಿದ್ದಾರೆ.

 ಟೀಮ್ ಇವೆಂಟ್‌ನಲ್ಲಿ ಭಾರತದ ಗುರುಪ್ರೀತ್, ಅಮನ್‌ಪ್ರೀತ್ ಸಿಂಗ್(560) ಹಾಗೂ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ವಿಜಯ್‌ಕುಮಾರ್(560)ಒಟ್ಟಿಗೆ 1,699 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News