ಸೆ.21ರಿಂದ ಮಂಗಳೂರಿನಲ್ಲಿ ಪ್ರಾದೇಶಿಕ ಭಾಷಾ ಚಿತ್ರೋತ್ಸವ

Update: 2018-09-15 12:56 GMT

ಬೆಂಗಳೂರು, ಸೆ.15: ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಸೆ.21, 22 ಹಾಗೂ 23ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಶನಿವಾರ ನಗರದ ವಾರ್ತಾ ಇಲಾಖೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡ ಸಿನೆಮಾ ಒಳಗೊಂಡಂತೆ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಬಂಜಾರ ಭಾಷೆಯ ಒಟ್ಟು 9 ಸಿನೆಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ವಸತಿ ಸಚಿವ ಯು.ಟಿ.ಖಾದರ್ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸಿನೆಮಾ ರಂಗದ ಕಾರ್ಯಚಟುವಟಿಕೆಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಳ್ಳಬಾರದು. ಈ ಹಿನ್ನೆಲೆಯಲ್ಲಿ ಕನ್ನಡ ಸಿನೆಮಾ ರಂಗದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಸಿನೆಮಾ ಕ್ಷೇತ್ರವನ್ನು ಗಡಿನಾಡ ಪ್ರದೇಶಗಳಿಗೆ ವಿಸ್ತರಿಸುವ ಭಾಗವಾಗಿ ಮಂಗಳೂರಿನಲ್ಲಿ ಪ್ರಾದೇಶಿಕ ಚಲನಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.

ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಗೆ ವಿಶಿಷ್ಟವಾದ ಸ್ಥಾನವಿದೆ. ಭಾಷೆಯ ಜೊತೆಗೆ ಆಳವಾದ ಚಾರಿತ್ರಿಕ ಹಿನ್ನೆಲೆಯನ್ನು ಒಳಗೊಂಡಿದೆ. ಹಾಗೂ ದಕ್ಷಿಣಕನ್ನಡ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಒಳಗೊಂಡಿರುವ ಪ್ರದೇಶವಾಗಿದೆ. ಇಲ್ಲಿನ ಸಿನೆಮಾ ನಿರ್ದೇಶಕರು, ತಂತ್ರಜ್ಞರು ಕನ್ನಡ ಹಾಗೂ ಹಿಂದಿ ಭಾಷೆಯ ನಂಟನ್ನು ಉಳಿಸಿಕೊಳ್ಳುತ್ತಲೆ ತುಳು ಭಾಷೆಯನ್ನು ಸೃಜನಾತ್ಮಕವಾಗಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಮತ್ತಷ್ಟು ಪ್ರೋತ್ಸಾಹಿಸಿ, ಬೆಳೆಸುವುದು ಅಕಾಡೆಮಿಯ ಕರ್ತವ್ಯವೆಂದು ಅವರು ಹೇಳಿದರು.

ಪ್ರಾದೇಶಿಕ ಚಲನಚಿತ್ರೋತ್ಸವದಲ್ಲಿ ವಿದ್ಯಾರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಸಿನಿಮೋತ್ಸವದಲ್ಲಿ ಕೇವಲ ಸಿನೆಮಾಗಳ ಪ್ರದರ್ಶನ ಮಾತ್ರ ಇರುವುದಿಲ್ಲ. ಪ್ರದರ್ಶನಗೊಳ್ಳುವ ಸಿನಿಮಾ ನಿರ್ದೇಶಕರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಪ್ರಾದೇಶಿಕ ಚಲನಚಿತ್ರೋತ್ಸವ ಸಂಚಾಲಕ ಪ್ರೊ.ನಾ.ದಾಮೋದರ ಶೆಟ್ಟಿ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸಿನೆಮಾ ಚಟುವಟಿಕೆಗಳನ್ನು ಗಮನಿಸಿದರೆ, ಇದು ಎರಡನೆ ಗಾಂಧಿ ನಗರವೆಂದರೆ ತಪ್ಪಾಗಲಾರದು. ದಕ್ಷಿಣಕನ್ನಡದಲ್ಲಿ ಪ್ರಾದೇಶಿಕ ಚಲನಚಿತ್ರೋತ್ಸವ ಹಿಂದೆಯೆ ಆಗಬೇಕಿತ್ತು. ಆದರೂ ಈಗ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಆಗುತ್ತಿರುವುದಕ್ಕೆ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರದರ್ಶಗೊಳ್ಳುವ ಸಿನೆಮಾಗಳ ಪಟ್ಟಿ

ತುಳು-ಪಡ್ಡಾಯಿ(ನಿರ್ದೇಶಕ-ಅಭಯಸಿಂಹ)

ಕೊಡವ-ತಳಂಗ್‌ನೀರ್(ನಿರ್ದೇಶಕ-ಗೋಪಿ ಪೀಣ್ಯ)

ಕೊಂಕಣಿ-ಉಜ್ವಾಡು(ನಿರ್ದೇಶಕ-ಕಾಸರಗೋಡು ಚಿನ್ನಾ)

ಬ್ಯಾರಿ-ಬ್ಯಾರಿ(ನಿರ್ದೇಶಕ -ಸುವೀರನ್)

ಬಂಜಾರ-ಕೊಂಜಾವರಮ್(ನಿರ್ದೇಶಕ ಉಮೇಶ್‌ ನಾಯಕ್)

ಜನಪ್ರಿಯ ಸಿನೆಮಾ

ಬಂಗಾರ್ ಪಟ್ಲೇರ್(ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ)

ಒರಿಯರ್ದೊರಿ ಅಸಲ್(ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್)

ಚಾಲಿ ಪೋಲಿಲು(ನಿರ್ದೇಶಕ ವೀರೇಂದ್ರ ಶೆಟ್ಟಿ)

ಪ್ರಾದೇಶಿಕ ಸಿನೆಮೋತ್ಸವದಲ್ಲಿ ಒಟ್ಟು 400ಮಂದಿ ಸಿನೆಮಾಸಕ್ತರಿಗೆ ಅವಕಾಶವಿದೆ. ಅದರಲ್ಲಿ 300ಮಂದಿ ವಿದ್ಯಾರ್ಥಿಗಳಾದರೆ, 100ಮಂದಿ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಸಿನೆಮಾಸಕ್ತರು ಬರುವ ನಿರೀಕ್ಷೆಯಿದೆ.

-ಪ್ರೊ.ದಾಮೋದರ ಶೆಟ್ಟಿ, ಸಂಚಾಲಕ, ಪ್ರಾದೇಶಕ ಭಾಷಾ ಚಲನಚಿತ್ರೋತ್ಸವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News