ಕೊಡಗು ಸಂತ್ರಸ್ತರಿಗೆ ಶಾಶ್ವತ ಪುನರ್‌ವಸತಿ ಕಲ್ಪಿಸಲು ಸಿಎನ್‌ಸಿ ಒತ್ತಾಯ

Update: 2018-09-15 13:11 GMT

ಬೆಂಗಳೂರು, ಸೆ.15: ವಾಯವ್ಯ ಕೊಡಗಿನಲ್ಲಿ ಸಂಭವಿಸಿದ್ದ ಭೂಕುಸಿತವನ್ನು ಅಂತರ್‌ರಾಷ್ಟ್ರೀಯ ವಿಪತ್ತು ಮತ್ತು ರಾಷ್ಟ್ರೀಯ ಉತ್ಪಾತ ಎಂದು ಪರಿಗಣಿಸಿ ನಿರಾಶ್ರಿತ ಸಂತ್ರಸ್ತರಿಗೆ ಶಾಸನಬದ್ಧ ಶಾಶ್ವತ ಪುನರ್‌ವಸತಿ ಕಲ್ಪಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸರಕಾರವನ್ನು ಒತ್ತಾಯಿಸಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಕೌನ್ಸಿಲ್‌ನ ಅಧ್ಯಕ್ಷ ಎನ್.ಯು.ನಾಚ್ಚಪ್ಪ ಕೊಡವ ಮಾತನಾಡಿ, ಕೊಡಗು ಸಂತ್ರಸ್ತರ ಹಣ ದುರುಪಯೋಗ ಮಾಡಿಕೊಳ್ಳದೆ, ವಾಯವ್ಯ ಕೊಡಗಿನ ಶೇ.12 ಭೂ ಭಾಗದ 3ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಿರಾಶ್ರಿತರಿಗೆ ಶಾಶ್ವತ ಪುನರ್‌ವಸತಿ ಕಲ್ಪಸಬೇಕು ಹಾಗೂ ಅವರ ಜೀವನ ನಿರ್ವಹಣೆಗಾಗಿ 30ಸಾವಿರ ಕೋಟಿ ಆರ್ಥಿಕ ಪ್ಯಾಕೇಜ್ ಅನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭರಿಸಬೇಕು ಎಂದು ಆಗ್ರಹಿಸಿದರು.

ಪುನರ್‌ವಸತಿ ಕಾರ್ಯ ಆರಂಭಕ್ಕೆ ಮೊದಲೆ ಸಂತ್ರಸ್ತರೆಲ್ಲರ ಜಮ್ಮಾ ಆಸ್ತಿಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಗುರುತಿಸಿಕೊಡಬೇಕು. ಐಡಿ ಕಾರ್ಡ್, ಭೂ ದಾಖಲೆ ಕಳೆದುಕೊಂಡವರನ್ನು ಕಡ್ಡಾಯವಾಗಿ ದಾಖಲೆ ತರಬೇಕೆಂದು ಪೀಡಿಸಬಾರದು ಎಂದರು.

ವಿನಾಕಾರಣ ಕೊಡಗಿನ 6 ಲಕ್ಷ ಜನಸಂಖ್ಯೆಯಲ್ಲಿ 3 ಲಕ್ಷ ಜನರಿಗೆ 3500 ರೂ. ವಿತರಿಸುವ ಬದಲು, ಅದನ್ನು ಒಟ್ಟುಗೂಡಿಸಿ ಕೊಡ್ಲಿಪೇಟೆಯಿಂದ ಕುಟ್ಟದವರೆಗೆ, ಬಿರುನಾಣಿಯಿಂದ ಪೆರಾಜೆಯವರೆಗಿನ 30 ಗ್ರಾಮಗಳ 15ರಿಂದ 20ಸಾವಿರ ಸಂತ್ರಸ್ತರ ಶಾಶ್ವತ ಪುನರ್‌ವಸತಿಗೆ ಸಹಾಯ ಮಾಡಬಹುದಿತ್ತು ಎಂದರು.

ಹಾರಂಗಿ ಅಣೆಕಟ್ಟಿನ ಮಣ್ಣಿನ ಲವಣಾಂಶ ಕ್ಯಾಚ್‌ಮೆಂಟ್ ಏರಿಯಾದ ನದಿಪಾತ್ರಗಳನ್ನು ಸೀಳಿ ಬರುತ್ತಿರುವುದು ಕೊಡಗಿನ ಭೂಕುಸಿತಕ್ಕೆ ಸಾಕ್ಷಿಯಾಗಿದೆ. ಅಲ್ಲದೆ, ಪೇಸ್ಟ್ ಮಾದರಿಯ ಲವಣಾಂಶವು ಹಿನ್ನೀರಿನಲ್ಲಿ ಯಥೇಚ್ಛವಾಗಿ ಗೋಚರವಾಗುತ್ತಿದ್ದು, ಹಾರಂಗಿ ಜಲಾಶಯ ಕೊಡಗಿನ ಹೃದಯದ ಮೇಲೆ ಕುಳಿತಿರುವ ಜೀವಂತ ಬಾಂಬ್ ಎಂದು ಸರಕಾರವನ್ನು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News