ಸರಕಾರ ಉರುಳಿದರೆ ಬಿಜೆಪಿಯ 104 ಶಾಸಕರು ಬಾಳೆಹಣ್ಣು ತಿನ್ನುತ್ತಾ ಕೂರಬೇಕೇ?
ಬೆಂಗಳೂರು, ಸೆ. 15: ‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ತನ್ನ ಆಂತರಿಕ ಬೇಗುದಿಯಿಂದ ಉರುಳಿಬಿದ್ದರೆ ಬಿಜೆಪಿಯ 104 ಮಂದಿ ಶಾಸಕರು ಕಡ್ಲೆಕಾಯಿ ಅಥವಾ ಬಾಳೆಹಣ್ಣು ತಿನ್ನುತ್ತಾ ಕೂರಬೇಕೇ? ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮೇಲ್ಮನೆ ಸದಸ್ಯ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಉರುಳಿಸುವ ಪ್ರಯತ್ನ ನಡೆಸಿದೆ ಎಂದು ಸಿಎಂ ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಆದರೆ, ಬಿಜೆಪಿ ಯಾವುದೇ ಕಾರಣಕ್ಕೂ ಅಂತಹ ಪ್ರಯತ್ನ ಮಾಡುವುದಿಲ್ಲ ಎಂದರು.
ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಿ: ರಾಜ್ಯದಲ್ಲಿ ಲಾಟರಿ, ರಿಯಲ್ ಎಸ್ಟೆಟ್ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡುವುದನ್ನು ಬಿಟ್ಟು, ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರಕಾರ ನಿಮ್ಮ ಹಿಡಿತದಲ್ಲೆ ಇದೆ ಎಂದು ರವಿಕುಮಾರ್ ಆಗ್ರಹಿಸಿದರು.
ಡಿಸಿಎಂ ಡಾ.ಜಿ.ಪರಮೇಶ್ವರ್, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಕುಮಾರಸ್ವಾಮಿಯವರೇ ಮಾಸ್ಟರ್ ಪಿನ್‌ಗಳಿದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ ರವಿಕುಮಾರ್, ಕಿಂಗ್ ಪಿನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಒತ್ತಾಯಿಸಿದರು.
ಆದಾಯ ತೆರಿಗೆ ಇಲಾಖೆಯನ್ನು ಬಿಜೆಪಿ ಮೋರ್ಚಾ ಕಚೇರಿ ಎಂದು ಲೇವಡಿ ಮಾಡುತ್ತಿದ್ದವರು ಇದೀಗ ಅಲ್ಲಿಯೇ ದೂರು ನೀಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು, ಸರಕಾರದ ಆಡಳಿತ ವಿಧಾನಸೌಧದ ಬದಲಿಗೆ ಹೊಳೆನರಸೀಪುರದಿಂದ ನಡೆಯುತ್ತಿದೆ. ನಿಮಗೆ ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ಸಚಿವ ಎಚ್.ಡಿ. ರೇವಣ್ಣಗೆ ಅಧಿಕಾರ ಬಿಟ್ಟುಕೊಡಿ ಎಂದು ಟೀಕಿಸಿದರು.
ಗುಪ್ತಚರ ಇಲಾಖೆ ಸೇರಿದಂತೆ ಸರಕಾರವೇ ನಿಮ್ಮ ಕೈಯಲ್ಲಿದೆ. ಕ್ರಮ ಕೈಗೊಳ್ಳುವುದು ಬಿಟ್ಟು ಬಿಜೆಪಿ ವಿರುದ್ಧ ಆರೋಪ ಸರಿಯಲ್ಲ. ಈ ರೀತಿ ಆರೋಪಗಳನ್ನು ಮಾಡುವುದು ಸಿಎಂ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಸರಕಾರ ಅಸ್ಥಿರವಾಗಿದ್ದು, ನಿಮ್ಮ ಕೈಯಲ್ಲಿ ಆಗಿಲ್ಲ ಅಂದರೆ ರಾಜೀನಾಮೆ ನೀಡಿ ಎಂದರು.
ಹೇಡಿ ಸಿಎಂ: ಇಂತಹ ಹೇಡಿ ಮುಖ್ಯಮಂತ್ರಿಯನ್ನು ನಾನು ಯಾವತ್ತೂ ನೋಡಿಲ್ಲ. ಎಲ್ಲ ಕಿಂಗ್‌ಪಿನ್‌ಗಳಿರುವುದು ಇಲ್ಲಿನ ಗಾಂಧಿನಗರದಲ್ಲಿ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮೂಗಿನ ಕೆಳಗೆ ಎಲ್ಲವೂ ನಡೆಯುತ್ತಿದೆ ಎಂದು ಸುದ್ಧಿಗೋಷ್ಠಿಯಲ್ಲಿದ್ದ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ದೂರಿದರು.
ಜೂಜು ಅಡ್ಡೆ ಹಾಗೂ ರಿಯಲ್ ಎಸ್ಟೆಟ್ ದಂಧೆಕೋರರೆಲ್ಲ ಜೆಡಿಎಸ್ ಪಕ್ಷದಲ್ಲೆ ಇದ್ದಾರೆ. ನಮ್ಮಲ್ಲಿ ಕಿಂಗ್(ಬಿಎಸ್‌ವೈ) ಮಾತ್ರ ಇದ್ದಾರೆ. ಪಿನ್‌ಗಳಿರುವುದು ನಿಮ್ಮ ಬಳಿಯೇ ಎಂದು ತಿರುಗೇಟು ನೀಡಿದ ಅವರು, ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಆಗದಿದ್ದರೆ ನೀವು ಅಸಮರ್ಥರೆಂದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ವಿರೇಂದ್ರ ಗೋವಾದಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದರು. ಇದೆಲ್ಲ ಕಾಂಗ್ರೆಸ್ ಪಕ್ಷದವರಿಗೆ ಗೊತ್ತಿಲ್ಲವೇ? ವಚನ ಭ್ರಷ್ಟರ ಜೊತೆ ಎಷ್ಟು ದಿನ ಇರಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ನಿಮ್ಮ ಅಸಲಿತನವನ್ನು ಅರಿತೇ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದ್ದಾರೆಂದು ಲೇವಡಿ ಮಾಡಿದರು.
ಜೆಡಿಎಸ್ ರೌಡಿಗಳ ಪಕ್ಷ: ಜೆಡಿಎಸ್ ಎಂದರೆ ರಿಯಲ್ ಎಸ್ಟೆಟ್ ಮಾಫಿಯಾ, ರೌಡಿಗಳ ಆಶ್ರಯ ತಾಣ, ಮುಖ್ಯಮಂತ್ರಿ ಕುಮಾರಸ್ವಾಮಿ ಸಮರ್ಥರಾಗಿದ್ದರೆ, ಕಿಂಗ್ ಯಾರು, ಪಿನ್ ಯಾರು ಎಂಬುದಕ್ಕೆ ಉತ್ತರ ಕೊಡಬೇಕೆಂದು ಶಾಸಕ ರೇಣುಕಾಚಾರ್ಯ ಆಗ್ರಹಿಸಿದರು.
‘ಬೆಳಗಾವಿ ಜಿಲ್ಲೆ ವಿಭಜನೆಯನ್ನು ರಾಜಕೀಯ ಉದ್ದೇಶಕ್ಕಾಗಿ ಮಾಡುವುದು ಸರಿಯಲ್ಲ. ರಾಜ್ಯದ ಗಡಿ ಜಿಲ್ಲೆಯಾಗಿದ್ದು, ಸರಕಾರ ಈ ವಿಚಾರದಲ್ಲಿ ಸೂಕ್ಷ್ಮತೆ ಇಟ್ಟುಕೊಳ್ಳಬೇಕು. ಸರಕಾರದ ಈ ನಡೆಯಿಂದ ಭಾಷೆ, ಗಡಿ ಸಮಸ್ಯೆ ಆಗಬಾರದು’
-ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ