ದಲಿತರಿಗೆ ಪ್ರತ್ಯೇಕ ಮತದಾನ ಹಕ್ಕು ವಿಚಾರದಲ್ಲಿ ಗಾಂಧಿ ನಿಲುವೇ ಸರಿಯಿತ್ತು: ರಾಜ್ಯಸಭಾ ಸದಸ್ಯ ಹನುಮಂತಯ್ಯ

Update: 2018-09-15 13:35 GMT

ಬೆಂಗಳೂರು, ಸೆ.15: ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮಗಾಂಧಿ ನಡುವೆ ದಲಿತರಿಗೆ ಪ್ರತ್ಯೇಕ ಮತದಾನ ಹಕ್ಕು ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೂ, ಈ ವಿಚಾರದಲ್ಲಿ ಗಾಂಧೀಜಿಯ ನಿಲುವೇ ಸರಿಯಾಗಿತ್ತು ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ.

ಶನಿವಾರ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಯುವ ಜನರಿಗೆ ಮೋಹನದಾಸ್ ಕರಮಚಂದ ಗಾಂಧೀಜಿ ಮತ್ತು ಭೀಮರಾಮ್ ರಾಮ್‌ಜೀ ಅಂಬೇಡ್ಕರ್ ವಿಚಾರಧಾರೆ’ ವಿಷಯ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಲಿತರಿಗೆ ಪ್ರತ್ಯೇಕ ಮತದಾನದ ಅವಕಾಶ ನೀಡಿದರೆ ಶೋಷಿತ ವರ್ಗವನ್ನು ಮತ್ತಷ್ಟು ಶೋಷಿತರನ್ನಾಗಿ ಮಾಡಿದಂತಾಗುತ್ತದೆ ಎಂಬುದು ಗಾಂಧೀಜಿ ವಾದವಾಗಿತ್ತು. ಆದರೆ, ಭಯವಿಲ್ಲದೆ, ಸ್ವತಂತ್ರವಾಗಿ ನೈಜ ಜನನಾಯಕ, ತಮಗಿಷ್ಟವಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ ದಲಿತರಿಗೆ ಮತದಾನ ಹಕ್ಕು ಸಿಗಬೇಕು ಎಂಬುದು ಅಂಬೇಡ್ಕರ್ ವಾದವಾಗಿತ್ತು. ಇದನ್ನು ಮಹಾತ್ಮಗಾಂಧೀಜಿ ವಿರೋಧಿಸಿ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದರು ಎಂದು ಅವರು ತಿಳಿಸಿದರು.

ಗಾಂಧೀಜಿ ಮತ್ತು ಅಂಬೇಡ್ಕರ್ ಭಾರತದ ಅತಿದೊಡ್ಡ ನಿರ್ಮಾಪಕರಾಗಿದ್ದಾರೆ. ಅಹಿಂಸೆ ಮೂಲಕ ಗಾಂಧಿ ಚಳವಳಿ ಕಟ್ಟಿದರೆ, ತನ್ನ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ, ಶೋಷಿತ ವರ್ಗಗಳ ಪರವಾಗಿ ಅಂಬೇಡ್ಕರ್ ಚಳವಳಿ ಕಟ್ಟಿದ್ದಾರೆ. ಈ ಇಬ್ಬರೂ ನಾಯಕರು ದೇಶ ಕಂಡ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದು ಬಣ್ಣಿಸಿದರು.

ದೇಶದಲ್ಲಿ ಅಹಿಂಸೆ ಮೂಲಕ ಹೋರಾಟ ನಡೆಸುತ್ತಿದ್ದ ಗಾಂಧೀಜಿಯ ಮಾತನ್ನು ಯಾರೂ ನಿರಾಕರಿಸುತ್ತಿರಲಿಲ್ಲ. ಅವರು ಏನು ಹೇಳಿದರೂ ಅದನ್ನು ಜನರು ತಪ್ಪದೇ ಪಾಲಿಸುತ್ತಿದ್ದರು. ಈ ಸಂದರ್ಭದಲ್ಲಿ ಗಾಂಧೀಜಿ ಮನಸ್ಸು ಮಾಡಿದ್ದರೆ ಬಯಸಿದ ಹುದ್ದೆಯನ್ನು, ಸ್ಥಾನ-ಮಾನಗಳನ್ನು ಪಡೆದುಕೊಳ್ಳಬಹುದಿತ್ತು. ಆದರೆ, ಅವರು ಎಂದೂ ತನ್ನ ಸ್ವಾರ್ಥಕ್ಕಾಗಿ ಏನನ್ನು ಯೋಚಿಸಿದವರಲ್ಲ. ಅಲ್ಲದೆ, ತಾವು ನಂಬಿದ ತತ್ವ ಸಿದ್ಧಾಂತದಲ್ಲಿ ಎಂದೂ ರಾಜಿ ಮಾಡಿಕೊಂಡವರಲ್ಲ ಎಂದು ಹನುಮಂತಯ್ಯ ಹೇಳಿದರು.

ಸ್ವತಂತ್ರ ರಾಷ್ಟ್ರವಾದ ಭಾರತದಲ್ಲಿಂದು ಅಸಮಾನತೆ, ಜಾತೀಯತೆ ಮಿತಿ ಮೀರಿ ಬೆಳೆಯುತ್ತಿದೆ. ಭ್ರಷ್ಟಾಚಾರ ಬೃಹದಾಕಾರದಲ್ಲಿ ಹೆಚ್ಚುತ್ತಿದೆ. ಮತ್ತೊಂದು ಕಡೆ ರಕ್ಷಕರಾಗಬೇಕಿದ್ದ ಪೊಲೀಸರು ಹಿಂಸಾಕಾರರಾಗುತ್ತಿದ್ದಾರೆ. ವಕೀಲರು, ವೈದ್ಯರು ಸುಲಿಗೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಶಾಂತಿ ತತ್ವ ಹೇಳಿಕೊಟ್ಟ ಮಹಾತ್ಮಗಾಂಧಿ ಹಾಗೂ ಶೋಷಣೆಯ ವಿರುದ್ಧ, ಸಮಾನತೆ ಪರವಾಗಿ ಧ್ವನಿ ಎತ್ತಿದ ಅಂಬೇಡ್ಕರ್‌ರ ವಿಚಾರಧಾರೆಗಳು ಪ್ರಸ್ತುತವಾಗಬೇಕಿದೆ. ಅದನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜರೂರು ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಎಸ್.ರಾಮಲಿಂಗೇಶ್ವರ (ಸಿಸಿರಾ), ಡಾ.ಎಸ್.ಪೂರ್ಣಿಮಾ, ಶೇಷಾದ್ರಿಪುರಂ ಕಾಲೇಜಿನ ಪ್ರಾಶುಂಪಾಲ ಪ್ರೊ.ವಿದ್ಯಾ ಶಿವಣ್ಣವರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News