‘ತಂಡಕ್ಕೆ ವಾಪಸಾಗಲು ಸಚಿನ್ ಸ್ಫೂರ್ತಿಯಾಗಿದ್ದರು’

Update: 2018-09-15 18:33 GMT

ಹೊಸದಿಲ್ಲಿ, ಸೆ.15: ‘‘ಈ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್ ಬಳಿಕ ನನ್ನ ಆತ್ಮವಿಶ್ವಾಸ ಕಡಿಮೆಯಾಗಿತ್ತು. ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್‌ರೊಂದಿಗೆ ಟೆಲಿಫೋನ್‌ನಲ್ಲಿ ಸಂಭಾಷಣೆ ನಡೆಸಿದ ಬಳಿಕ ಹೊಸ ಹುಮ್ಮಸ್ಸು ಬಂತು. ಕಠಿಣ ಶ್ರಮವಹಿಸಿ ಭಾರತ ತಂಡಕ್ಕೆ ವಾಪಸಾಗಲು ಸಚಿನ್ ಅವರ ಮಾತು ಸ್ಫೂರ್ತಿ ನೀಡಿತು’’ ಎಂದು ಭಾರತದ ಮಾಜಿ ಹಾಕಿ ನಾಯಕ ಸರ್ದಾರ್ ಸಿಂಗ್ ಹೇಳಿದ್ದಾರೆ.

ಭಾರತ ತಂಡ ಏಶ್ಯನ್ ಗೇಮ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳಲು ವಿಫಲವಾಗಿತ್ತು. ಕಂಚಿನ ಪದಕದೊಂದಿಗೆ ಸ್ವದೇಶಕ್ಕೆ ವಾಪಸಾಗಿತ್ತು. ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಬುಧವಾರ ಸರ್ದಾರ್ ಸಿಂಗ್ 12 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು.

ಈ ವರ್ಷ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸರ್ದಾರ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಆಗ ಅವರು ಸಚಿನ್ ಸಲಹೆಯ ಮೊರೆ ಹೋಗಿದ್ದರು. ಸಚಿನ್ ಸಲಹೆಯ ಬಳಿಕ ಮಾಜಿ ನಾಯಕ ಸರ್ದಾರ್ ಚಾಂಪಿಯನ್ಸ್ ಟ್ರೋಫಿ ವೇಳೆ ತಂಡಕ್ಕೆ ವಾಪಸಾಗಿದ್ದರು. ಭಾರತ ಐತಿಹಾಸಿಕ ಬೆಳ್ಳಿ ಪದಕ ಜಯಿಸಲು ನೆರವಾಗಿದ್ದರು.

 ‘‘ಸಚಿನ್ ಸರ್ ನನಗೆ ಸ್ಫೂರ್ತಿಯಾಗಿದ್ದಾರೆ. ಕಳೆದ 3-4 ತಿಂಗಳುಗಳ ಕಾಲ ಅವರು ನನಗೆ ತುಂಬಾ ನೆರವು ನೀಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಂಡದಲ್ಲಿ ಸ್ಥಾನ ಕಳೆದುಕೊಂಡಾಗ ನಾನು ಹತಾಶನಾಗಿದ್ದೆ. ನನ್ನೊಂದಿಗೆ 20 ನಿಮಿಷಗಳ ಕಾಲ ಆಪ್ತ ಸಮಾಲೋಚನೆ ನಡೆಸಿದ ಸಚಿನ್ ಟೀಕೆಗಳನ್ನೆಲ್ಲಾ ಮರೆತು, ಪಂದ್ಯದತ್ತ ಗಮನ ನೀಡುವಂತೆ ಕಿವಿ ಮಾತು ಹೇಳಿದ್ದರು’’ ಎಂದು ಸರ್ದಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News