ಹೈಕೋರ್ಟ್‌ಗಳ ನ್ಯಾಯಮೂರ್ತಿ ಖಾಲಿ ಹುದ್ದೆ ಭರ್ತಿಗೆ ಎಷ್ಟು ವರ್ಷ ಬೇಕು ಗೊತ್ತೇ?

Update: 2018-09-16 03:53 GMT

ಹೊಸದಿಲ್ಲಿ, ಸೆ.16: ಹೈಕೋರ್ಟ್‌ಗಳ ನೇಮಕಾತಿ ಪ್ರಕ್ರಿಯೆಯ ಪ್ರಸ್ತುತ ವೇಗ ಮತ್ತು ವಾರ್ಷಿಕ 75-85 ನ್ಯಾಯಮೂರ್ತಿಗಳು ಪ್ರತಿ ವರ್ಷ ನಿವೃತ್ತರಾಗುವುದನ್ನು ಪರಿಗಣಿಸಿದರೆ, ಹಾಲಿ 24 ಹೈಕೋರ್ಟ್‌ಗಳಲ್ಲಿರುವ 427 ನ್ಯಾಯಮೂರ್ತಿ ಹುದ್ದೆಗಳ ಭರ್ತಿಗೆ ಕನಿಷ್ಠ 15 ವರ್ಷಗಳು ಬೇಕಾಗುತ್ತವೆ.

ಹೈಕೋರ್ಟ್‌ಗಳಲ್ಲಿನ ಖಾಲಿ ಹುದ್ದೆಗಳ ಪ್ರಮಾಣ ಆಗಸ್ಟ್ 31ಕ್ಕೆ ಶೇ.40ಕ್ಕೆ ಹೆಚ್ಚಿದೆ. ಒಟ್ಟು ಅನುಮೋದಿತ ಹುದ್ದೆಗಳ ಸಂಖ್ಯೆ 1,079 ಇದ್ದರೆ, ಕೇವಲ 652 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 427 ಹುದ್ದೆಗಳು ಖಾಲಿ ಉಳಿದಿವೆ.

ಎನ್‌ಡಿಎ ಸರ್ಕಾರ ಉನ್ನತ ನ್ಯಾಯಾಂಗ ವ್ಯವಸ್ಥೆಯ ಶಿಫಾರಸಿನಂತೆ ಇತ್ತೀಚಿನ ವರ್ಷಗಳಲ್ಲಿ ಗರಿಷ್ಠ ಹುದ್ದೆಗಳನ್ನು ಭರ್ತಿ ಮಾಡಿದ್ದರೂ, ಸದ್ಯ ನಿವೃತ್ತಿಯಾಗುತ್ತಿರುವವರ ಸಂಖ್ಯೆಯನ್ನು ಪರಿಗಣಿಸಿದರೆ, ಒಟ್ಟು ಸೇರ್ಪಡೆಯಾಗುತ್ತಿರುವ ನ್ಯಾಯಾಧೀಶರ ಸಂಖ್ಯೆ ವಾರ್ಷಿಕ ಸರಾಸರಿ 29.

2015ರ ಎಪ್ರಿಲ್‌ನಿಂದ 2018ರ ಮೇ ತಿಂಗಳ ವರೆಗೆ ಕಾನೂನು ಸಚಿವಾಲಯ 313 ಹೆಚ್ಚುವರಿ ನ್ಯಾಯಾಧೀಶ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ವಾರ್ಷಿಕ ಸರಾಸರಿ 104 ನ್ಯಾಯಾಧೀಶರನ್ನು ನೇಮಿಸುತ್ತಿದೆ. ಇಷ್ಟಾಗಿಯೂ ನಿವೃತ್ತರಾಗುತ್ತಿರುವ ನ್ಯಾಯಾಧೀಶರ ಸಂಖ್ಯೆಯನ್ನು ಪರಿಗಣಿಸಿದರೆ, ಹೆಚ್ಚುವರಿ ಸೇರ್ಪಡೆ ನಿಧಾನವಾಗುತ್ತಿದೆ. ಯುಪಿಎ ಆಡಳಿತಾವಧಿಯಲ್ಲಿ 2012ರಿಂದ 2014ರವರೆಗೆ 250 ಹೆಚ್ಚುವರಿ ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ಅಂದರೆ ಪ್ರತಿ ವರ್ಷ ಸರಾಸರಿ 83 ನ್ಯಾಯಾಧೀಶರನ್ನು ನೇಮಕ ಮಾಡಿತ್ತು.

ದೇಶದ ಹೈಕೋರ್ಟ್‌ಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಲೇ ಇದೆ. 2017ರ ಅಕ್ಟೋಬರ್‌ನಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 387 ಇದ್ದುದು, ಈ ವರ್ಷದ ಮಾರ್ಚ್‌ನಲ್ಲಿ 406ಕ್ಕೆ ಹಾಗೂ ಆಗಸ್ಟ್ 31ಕ್ಕೆ 427ಕ್ಕೇರಿದೆ. ಹೈಕೋರ್ಟ್‌ಗಳಲ್ಲಿ 39.52 ಲಕ್ಷ ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಶೇಕಡ 22ರಷ್ಟು 10 ವರ್ಷಗಳಿಗಿಂತಲೂ ಹಳೆಯ ಪ್ರಕರಣಗಳು ಎನ್ನುವುದು ಸರ್ಕಾರ ಹಾಗೂ ನ್ಯಾಯಾಂಗಕ್ಕೆ ಕಳವಳದ ವಿಚಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News