15 ಕೆಜಿ ಚಿನ್ನ ಕಳ್ಳ ಸಾಗಾಟ: ಇಬ್ಬರು ಯೋಧರು, ಮೂವರು ಪೊಲೀಸರ ಬಂಧನ

Update: 2018-09-16 05:33 GMT

 ಕೋಲ್ಕತಾ, ಸೆ.16: ಭೂತಾನ್‌ನಿಂದ ಪಶ್ಚಿಮಬಂಗಾಳಕ್ಕೆ 15 ಕೆಜಿ ತೂಕದ ಚಿನ್ನ ಕಳ್ಳ ಸಾಗಣೆಯಲ್ಲಿ ಭಾಗಿಯಾದ ಆರೋಪದಲ್ಲಿ ಸೇನೆಯ ಗುಪ್ತಚರ ಅಧಿಕಾರಿ ಹಾಗೂ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಸಹಿತ ಐವರು ಅಧಿಕಾರಿಗಳನ್ನು ಶನಿವಾರ ಬಂಧಿಸಲಾಗಿದೆ ಎಂದು ಪಶ್ವಿಮಬಂಗಾಳದ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಹಾಸಿಮರಾ ಸೇನಾ ಶಿಬಿರದ ಲೆಫ್ಟಿನೆಂಟ್ ಕರ್ನಲ್ ಪವನ್ ಬ್ರಹ್ಮ, ಜೈಗಾಂವ್‌ನ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅನಿರುದ್ಧ್ ಠಾಕೂರ್, ಹಾಸಿಮರಾ ಹಾಗೂ ಬರೊವಿಸಾ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್‌ಗಳಾದ ಸತ್ಯೇಂದ್ರನಾಥ್ ರಾಯ್ ಹಾಗೂ ಕಮಲೇಂದು ನಾರಾಯಣ್ ಹಾಗೂ ಸೇನಾ ಗುಪ್ತಚರ ಇಲಾಖೆಯ ಕಾನ್‌ಸ್ಟೇಬಲ್ ದಶರಥ್ ಸಿಂಗ್ ಬಂಧಿತ ಅಧಿಕಾರಿಗಳಾಗಿದ್ದಾರೆ.

ಈ ಐವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಐವರು ಅಧಿಕಾರಿಗಳು ಭೂತಾನ್‌ನಿಂದ ಪಶ್ಚಿಮಬಂಗಾಳಕ್ಕೆ ದೊಡ್ಡ ಮಟ್ಟದ ಲೋಹವನ್ನು ಸಾಗಿಸುತ್ತಿದ್ದ ವಾಹನದಲ್ಲಿ 15 ಕೆಜಿ ತೂಕದ ಚಿನ್ನ ಕಳ್ಳ ಸಾಗಾಟದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ.

ರಾಜ್ಯದ ಗಡಿ ಪ್ರದೇಶದಲ್ಲಿ ಕಳ್ಳ ಸಾಗಣೆ ಹೆಚ್ಚಾಗುತ್ತಿರುವ ಬಗ್ಗೆ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ಬಂಧನ ಪ್ರಕ್ರಿಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News