ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಒತ್ತಾಯ

Update: 2018-09-16 13:44 GMT

ಬೆಂಗಳೂರು, ಸೆ.16: ಇಂಡಿಯನ್ ಮೋಟಾರ್ ವಾಹನ ಕಾಯ್ದೆಗೆ ಕೇಂದ್ರ ಸರಕಾರ ಇತ್ತೀಚಿಗೆ ತಂದಿರುವ ತಿದ್ದುಪಡಿಗಳು ಜನ ವಿರೋಧಿಯಾಗಿದ್ದು, ಕೂಡಲೇ ಅದನ್ನು ರದ್ಧು ಮಾಡಬೇಕು ಎಂದು ಎಐಯುಟಿಯುಸಿ ರಾಷ್ಟ್ರೀಯ ಅಧ್ಯಕ್ಷ ಕೆ.ರಾಧಾಕೃಷ್ಣ ಒತ್ತಾಯಿಸಿದ್ದಾರೆ.

ನಗರದ ಕೆ.ಆರ್.ವೃತ್ತದ ಬಳಿಯಿರುವ ವಿಶ್ವೇಶ್ವರಯ್ಯ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘುವಾಹನ ಚಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ಖಾಸಗಿ ಶಾಲಾ ವಾಹನ ಚಾಲಕರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಸ್ತೆ ತೆರಿಗೆ, ವಿಮೆ ಇತ್ಯಾದಿ ಹೆಸರಿನಲ್ಲಿ ಕಟ್ಟಲಾಗದಂತಹ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಮತ್ತೊಂದು ಕಡೆ, ಸಣ್ಣ ಪುಟ್ಟ ಉಲ್ಲಂಘನೆಗೂ ಭಾರಿ ದಂಡ ವಿಧಿಸಲಾಗುತ್ತದೆ. ಅಲ್ಲದೆ, ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯ ಏರಿಕೆ ಮಾಡುವ ಮೂಲಕ ಚಾಲಕರ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ಕೂಡಲೇ ತನ್ನ ನೀತಿಗಳನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ, ತೀವ್ರವಾದ ಹೋರಾಟ ರೂಪಿಸುವುದೇ ನಮ್ಮ ಮುಂದಿರುವ ದಾರಿಯಾಗಿದೆ ಎಂದು ತಿಳಿಸಿದರು.

ದೇಶದಲ್ಲಿಂದು ಆಳ್ವಿಕೆ ನಡೆಸುತ್ತಿರುವ ಸರಕಾರಗಳು ನಿರುದ್ಯೋಗ ಸಮಸ್ಯೆ ನಿವಾರಿಸುವ ಬದಲಿಗೆ, ಮತ್ತಷ್ಟು ಬಿಕ್ಕಟ್ಟಿನ ಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ನೋಟು ಅಮಾನ್ಯೀಕರಣದಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡು, ನಿರುದ್ಯೋಗಿಗಳಾಗಿದ್ದಾರೆ. ಒಟ್ಟಾರೆಯಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಬಂಡವಾಳಶಾಹಿ, ಕಾರ್ಪೋರೇಟ್ ವ್ಯವಸ್ಥೆಯ ಪರವಾಗಿ ಕೆಲಸ ಮಾಡುತ್ತಿದೆ. ದೇಶದ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಶಾಲಾ ಚಾಲಕರು ಸ್ವ-ಉದ್ಯೋಗ ಕಲ್ಪಿಸಿಕೊಂಡು ದಶಕಗಳಿಂದ ಸಮಾಜಕ್ಕೆ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸರಕಾರ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಚಾಲಕರ ಬೆಂಬಲಕ್ಕೆ ನಿಲ್ಲಬೇಕು. ಅದನ್ನು ಬಿಟ್ಟು, ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಚಾಲಕರು ದಶಕಗಳಿಂದ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದ ಜಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ ಎಂದ ಅವರು, ಈ ಹಿಂದೆ ಸದನದಲ್ಲಿ ಘೋಷಿಸಿದ್ದ ಶೇ.50 ತೆರಿಗೆ ವಿನಾಯಿತಿಯನ್ನು ಇದುವರೆಗೂ ಜಾರಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಿ.ಎಸ್.ಷಣ್ಮುಗಂ ರನ್ನು ಸಂಘದ ಅಧ್ಯಕ್ಷ, ದಾಮೋದರ್ ಪ್ರಧಾನ ಕಾರ್ಯದರ್ಶಿಯಾಗಿ, ಕುಶಾರಾಜ್, ಸೆಲ್ವರಾಜು, ಕೃಷ್ಣಮೂರ್ತಿ, ಆಂಜಿನಪ್ಪ ರನ್ನು ಉಪಾಧ್ಯಕ್ಷರನ್ನಾಗಿ ಹಾಗೂ ಗೋವಿಂದರಾಜನ್‌ರನ್ನು ಸಲಹೆಗಾರರನ್ನಾಗಿ ಸೇರಿದಂತೆ 35 ಜನರ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್, ಜಿಲ್ಲಾ ಉಪಾಧ್ಯಕ್ಷೆ ಟಿ.ಸಿ.ರಮಾ, ಜಿಲ್ಲಾ ಕಾರ್ಯದರ್ಶೀ ಜಿ.ಹನುಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News