ಶೋಷಿತರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನದ ವಿರುದ್ಧ ಹೋರಾಟ ಅಗತ್ಯ: ಮಾಜಿ ಸಚಿವ ಎಚ್.ಸಿ.ಮಹದೇವಪ್ಪ

Update: 2018-09-16 14:05 GMT

ಬೆಂಗಳೂರು, ಸೆ. 16: ಕೋಮುವಾದಿ ಆರೆಸೆಸ್ಸ್, ಸಂಘಪರಿವಾರದವರು ನ್ಯಾಯಾಲಯಗಳ ಮೂಲಕ ದಲಿತ, ಶೋಷಿತರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನದ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಇಲ್ಲಿನ ದೊಡ್ಡಬಳ್ಳಾಪುರ ಸಮೀಪದ ಅನಿಬೆಸೆಂಟ್ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಅಧ್ಯಯನ ಶಿಬಿರದಲ್ಲಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ಸರಕಾರ ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡುವ ಮೂಲಕ ದಮನಿತರ ಧ್ವನಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕರ್ಮಭೂಮಿಯೇ ಬಿ.ಬಸವಲಿಂಗಪ್ಪರ ‘ಹೊಸ ಅಲೆ’ ಸೃಷ್ಟಿಗೆ ಕಾರಣ ಎಂದು ಸ್ಮರಿಸಿದ ಮಹದೇವಪ್ಪ, ಕನ್ನಡ ಸಾಹಿತ್ಯದ ಬಹುಪಾಲು ‘ಬೂಸಾ’ ಎಂಬ ಹೇಳಿಕೆ ನೀಡುವ ಮೂಲಕ ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿ ಹುಟ್ಟಿಗೆ ಕಾರಣವಾಗಿದ್ದು, ಇದೀಗ ಇತಿಹಾಸ ಎಂದು ನೆನಪು ಮಾಡಿಕೊಂಡರು.

ಪ್ರಧಾನಿ ಮೋದಿ ನೇತೃತ್ವದ ಸರಕಾರ ದಲಿತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಇಂತಹ ಸಂವಿಧಾನ, ಪ್ರಜಾಪ್ರಭುತ್ವ, ಶೋಷಿತ ಸಮುದಾಯಗಳ ವಿರೋಧಿಗಳು ಅಧಿಕಾರಕ್ಕೆ ಬರಬಾರದು. ಆದುದರಿಂದ ಇವರ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಮಹದೇವಪ್ಪ ಕರೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಹನ್ನೆರಡನೆ ಶತಮಾನದ ಬಸವಣ್ಣನವರ ಪ್ರಜ್ಞೆಯನ್ನೇ ಇವತ್ತಿನ ಮೇಲ್ಜಾತಿಗಳು ಮೈಗೂಡಿಸಿಕೊಳ್ಳುವ ಮೂಲಕ ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ನೀಡಬೇಕು ಎಂದು ಹೇಳಿದರು.

ಏಕ ಸಂಸ್ಕೃತಿಯನ್ನು ಪ್ರತಿಪಾದಿಸುವ ಆರೆಸೆಸ್ಸ್ ಸಂಸ್ಕೃತಿಯನ್ನು ದಲಿತ, ಶೂದ್ರರು ಮತ್ತು ಹಿಂದುಳಿದ ವರ್ಗಗಳು ವಿರೋಧಿಸಬೇಕು. ಸಂವಿಧಾನದ ಆಶಯಗಳಿಗೆ ಪೂರಕವಾಗಿ ತನ್ನ ಹಕ್ಕುಗಳನ್ನು ರಕ್ಷಿಸಬೇಕು ಎಂದು ಪ್ರೊ.ಸಿದ್ದರಾಮಯ್ಯ ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ದಸಂಸ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ವಹಿಸಿದ್ದರು. ಬೆಂಗಳೂರು ವಿಭಾಗೀಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ಸಂಘಟನಾ ಸಂಚಾಲಕ ಕಲ್ಲಪ್ಪ ಕಾಂಬ್ಲೆ, ಶ್ಯಾಂ ಘಾಟ್ಗೆ, ಶರಣಪ್ಪ ಗುಳಬಾಳ, ದೊಡ್ಡಮನಿ, ಶೋಭಾ ಕಟ್ಟಿಮನ, ಕ್ಯಾಲಸನಹಳ್ಳಿ ಶ್ರೀನಿವಾಸ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News