ಗೊಂದಲ ನಿವಾರಿಸುವ ಹೊಣೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಗಲಿಗೆ

Update: 2018-09-16 14:28 GMT

ಬೆಂಗಳೂರು, ಸೆ. 16: ಹನ್ನೆರಡು ದಿನಗಳ ವಿದೇಶ ಪ್ರವಾಸ ಮುಗಿಸಿ ರವಿವಾರ ರಾತ್ರಿ ಬೆಂಗಳೂರಿಗೆ ಹಿಂದಿರುಗಿರುವ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸ ಇದೀಗ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ.

ರವಿವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿ ಹಲವು ಶಾಸಕರು, ಮುಖಂಡರು, ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಸಿದ್ದರಾಮಯ್ಯ ಹೆಗಲಿಗೆ: ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸೂಚಿಸಿದ್ದು, ಜಾರಕಿಹೊಳಿ ಸಹೋದರರ ಬಂಡಾಯ ಶಮನಕ್ಕೂ ನಿರ್ದೇಶನ ನೀಡಿದ್ದಾರೆಂದು ಗೊತ್ತಾಗಿದೆ.

ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮುಖಂಡರು, ಕಾಂಗ್ರೆಸ್ ಪಕ್ಷದ ಹಲವು ಶಾಸಕರನ್ನು ಸಂಪರ್ಕಿಸಿದ್ದು, ಇದರಿಂದಾಗಿ ಪಕ್ಷ ಹಾಗೂ ಸರಕಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಅತೃಪ್ತ ಶಾಸಕರನ್ನು ಕರೆದು ಚರ್ಚಿಸುವ ಹೊಣೆಯನ್ನು ಸಿದ್ದರಾಮಯ್ಯ ಹೆಗಲಿಗೆ ವಹಿಸಿದ್ದಾರೆಂದು ತಿಳಿದು ಬಂದಿದೆ.

ಬಿಜೆಪಿಯವರ ಆಪರೇಷನ್ ಕಮಲಕ್ಕೆ ಪ್ರತಿತಂತ್ರ ರೂಪಿಸುವುದು ಹಾಗೂ ಬೆಳಗಾವಿ ಜಾರಕಿಹೊಳಿ ಸಹೋದರರ ಅಸಮಾಧಾನ ತಣ್ಣಗಾಗಿಸಲು ಕೂಡಲೇ ಮುಂದಾಗಬೇಕು. ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಡಿಸಿಎಂಗೆ ಬುಲಾವ್: ಸಿದ್ದರಾಮಯ್ಯನವರ ನಿವಾಸದತ್ತ ಸುಳಿಯದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ದೂರವಾಣಿ ಕರೆ ಮಾಡಿದ ವೇಣುಗೋಪಾಲ್ ಕೂಡಲೇ ಸಭೆಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಜಾರಕಿಹೊಳಿ ಸಹೋದರರ ಅಸಮಾಧಾನ, ಬಿಜೆಪಿ ಆಪರೇಷನ್ ಕಮಲದ ಆಮಿಷ ಹಾಗೂ ಮೈತ್ರಿ ಸರಕಾರದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೆ, ಪರಿಷತ್ ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News