ಹಿಂದೂ ಎನ್ನುವುದು ಭೌಗೋಳಿಕತೆ ಸೂಚಿಸುವ ಶಬ್ದವೇ ಹೊರತು ಧರ್ಮವಲ್ಲ: ಸಿದ್ದರಾಮ ಸ್ವಾಮೀಜಿ

Update: 2018-09-16 14:50 GMT

ಬೆಂಗಳೂರು, ಸೆ.16: ಸಮಾನತೆಯೇ ಮೂಲ ಮಂತ್ರವಾಗಿರುವ ಲಿಂಗಾಯತ ಧರ್ಮವನ್ನು ನಾವು ಉಳಿಸಿಕೊಳ್ಳಬೇಕು. ಹೀಗಾಗಿ, ಅಪಪ್ರಚಾರ ಮಾಡುವ ಹಿಂದೂಗಳಾಗಲಿ, ವೀರಶೈವರ ಬಗ್ಗೆ ಆಗಲಿ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಗಾಂಧಿಭವನದ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಆಯೋಜಿಸಿದ್ದ, ಲಿಂಗಾಯತ ಹೋರಾಟ; ಪ್ರಶ್ನೆ-ಪರಿಹಾರ ಪುಸ್ತಕ ಲೋರ್ಕಾರ್ಪಣೆ ಹಾಗೂ ಅರಿವು ಅಭಿಯಾನ ಕಾರ್ಯಕ್ರಮ ನಡೆಯಿತು.

ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಲಿಂಗಾಯತ ಆಂದೋಲನದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಅಪಪ್ರಚಾರವೂ ಸಹ ಪ್ರಚಾರದ ಪ್ರಕಾರವೇ ಆಗಿದ್ದು, ಹಿಂದೂಗಳಾಗಲಿ, ವೀರಶೈವರ ಬಗ್ಗೆಯೇ ಆಗಲಿ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮುಂದೆ ಸತ್ಯದ ಅರಿವು ಎಲ್ಲರಿಗೂ ತಿಳಿಯಲಿದೆ ಎಂದು ಹೇಳಿದರು.

ಪಾದಪೂಜೆ ಬಿಡಿ: ಲಿಂಗಾಯತ ಧರ್ಮ ಸಮಾನತೆ ಪ್ರತಿಪಾದಿಸುತ್ತದೆ. ಈ ಸಮಾನತೆ ಸ್ವಾಮೀಜಿಗಳಲ್ಲೂ ಬರಬೇಕು ಎಂದ ಅವರು, ಪಾದಪೂಜೆ, ಪಾದಮುಟ್ಟಿ ನಮಸ್ಕಾರ ಮಾಡುವುದು. ಸ್ವಾಮಿಗಳ ಪಾದ ತೊಳೆದು ಪಾದೋದಕ ಸೇವನೆ ಮಾಡುವುದು ನಿಲ್ಲಬೇಕು. ಅಲ್ಲದೆ, ಪಾದಪೂಜೆಯ ನೀರು ಸೇವನೆ ಮಾಡಿದರೆ ಹಲವು ರೋಗಗಳು ಅಂಟಿಕೊಳ್ಳಲಿವೆ ಎಂದು ಚಂಪಾ ನುಡಿದರು.

ಲಿಂಗಾಯತ ಆಂದೋಲನದಲ್ಲಿ ಭಾಗಿಯಾದವರು ವೈದಿಕ ಧರ್ಮದ ನುಡಿಗಟ್ಟುಗಳನ್ನು ಬಳಸಬಾರದು. ನಮ್ಮದೇ ಆದ ನುಡಿಗಟ್ಟುಗಳು ಇರಲಿ. ನಾವು ಯಾವ ವರ್ಣಕ್ಕೂ ಸೇರಿದವರಲ್ಲ. ನಾವು ಲಿಂಗಾಯತರು ಎಂದು ಅಷ್ಟೇ ಹೇಳಿಕೊಳ್ಳೋಣ ಎಂದು ಕರೆ ನೀಡಿದರು.

ಹಿಂದೂ ಧರ್ಮವೇ ಅಲ್ಲ: ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವೀರಶೈವ ಎನ್ನುವುದು ಧರ್ಮವಲ್ಲ ಬದಲಾಗಿ ಅದೊಂದು ಮತವಾಗಿದೆ. ಅದೇ ರೀತಿ, ವಾಸ್ತವವಾಗಿ ಹಿಂದೂ ಎನ್ನುವುದೂ ಧರ್ಮ ಅಲ್ಲ. ಅದು ಭೌಗೋಳಿಕತೆ ಸೂಚಿಸುವ ಶಬ್ದವಾಗಿದ್ದು, ಸಿಂಧೂ ನದಿಯ ಪ್ರಾಂತ್ಯದಲ್ಲಿನ ನಿವಾಸಿಗಳೆಲ್ಲರೂ ಹಿಂದೂಗಳು ಎಂದು ಬ್ರಿಟೀಷರು, ಪರ್ಷಿಯನ್ನರು ಕರೆದರು. ಹೀಗೆ, ಭೌಗೋಳಿಕ ದೃಷ್ಟಿಯಲ್ಲಿ ನೋಡಿದರೆ ಎಲ್ಲರೂ ಹಿಂದೂಗಳು. ಆದರೆ, ವೈದಿಕರು ವೈದಿಕ ಆಚರಣೆಗಳನ್ನು ಒಳಗೊಂಡ ಧರ್ಮವನ್ನೆ ಹಿಂದೂ ಧರ್ಮ ಎಂದು ಪರಿವರ್ತಿಸಿಕೊಂಡರು ಎಂದರು.

ಮಹಾಸಭಾದ ಅಧ್ಯಕ್ಷ ಡಾ.ಎಸ್.ಎಂ.ಜಾಮದಾರ್ ಮಾತನಾಡಿ, ಲಿಂಗಾಯತ ಹೋರಾಟ ಆರಂಭದಲ್ಲಿ ದೇಶದ್ರೋಹಿಗಳು, ಹಿಂದೂ ವಿರೋಧಿಗಳು ಎಂದೆಲ್ಲಾ ನಮ್ಮನ್ನು ಬಿಂಬಿಸಿದರು.ಆದರೆ, ನಾವು ಯಾರ ವಿರೋಧಿಗಳೂ ಅಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಕುರಿತ ಬೇಡಿಕೆ 1920ರಿಂದ 2017ರವರೆಗೆ ಬಂದಿದೆ. ಇನ್ನು, ನಮ್ಮದು ರಾಜಕೀಯ ಹೋರಾಟ ಅಲ್ಲ. ನಮ್ಮದು ಧರ್ಮದ ಹೋರಾಟ. ಈ ಮಾಹಿತಿಯನ್ನು ನಮ್ಮವರಿಗೆ, ನಮ್ಮ ಹೋರಾಟದ ವಿರೋಧಿಗಳಿಗೆ ತಲುಪಿಸಬೇಕು ಎಂದು ನುಡಿದರು.

ಚಿಂತಕ, ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಮಾತನಾಡಿ, ಲಿಂಗಾಯತ ಎಂಬುದು ಸ್ವತಂತ್ರ ಧರ್ಮ. ಅದು ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕವೇ ಹುಟ್ಟಿಕೊಂಡಿದೆ. ಮುಂದೆ ಈ ಸಮುದಾಯದವರು ಬಸವಣ್ಣನ ತತ್ವಗಳ ಹಾದಿಯಲ್ಲಿ ನಡೆಯಬೇಕಿತ್ತು ಎಂಬ ಆಶಯ ಇತ್ತು. ಆದರೆ, ನಾನು ಆ ಪ್ರಯತ್ನದಲ್ಲಿ ಸೋತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಬೇಲಿಮಠ ಮಹಾಸಂಸ್ಥಾನದ ಡಾ.ಶಿವರುದ್ರಸ್ವಾಮೀಜಿ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು, ಮೈಸೂರಿನ ಹೊಸಮಠದ ನಟರಾಜ ಮಹಾಸ್ವಾಮಿ, ಜಿ.ಬಿ.ಪಾಟೀಲ, ಡಾ.ಟಿ.ಆರ್.ಚಂದ್ರಶೇಖರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

‘ಕೇಂದ್ರದ ಮೇಲೆ ಅನುಮಾನ’

‘ಲಿಂಗಾಯತ ಸ್ವಾತಂತ್ರ ಧರ್ಮದ ಮಾನ್ಯತೆಗಾಗಿ ರಾಜ್ಯ ಸರಕಾರವು ಪ್ರಸ್ತಾವವನ್ನು ಈಗಾಗಲೇ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿದೆ. ಆದರೆ, ಲಿಂಗಾಯತ ಮತ ಬ್ಯಾಂಕ್ ಕೈತಪ್ಪಬಹುದೋ ಎಂಬ ಆತಂಕದಿಂದ ಕೇಂದ್ರವು ಧರ್ಮದ ಮಾನ್ಯತೆ ನೀಡುವುದು ಅನುಮಾನ’

-ಸಿದ್ದರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ

ಪಾದಪೂಜೆ ನೀರಿನಲ್ಲಿ ರೋಗಗಳು..!

‘ಸ್ವಾಮೀಜಿಗಳ ಪಾದಗಳಿಗೆ ಪೂಜೆ ಮಾಡುವುದನ್ನು ಸಾಮೂಹಿಕವಾಗಿ ತಿರಸ್ಕರಿಸಬೇಕು.ಇನ್ನು, ಸ್ವಾಮೀಜಿಗಳ ಪಾದಗಳನ್ನು ನೀರಿನಲ್ಲಿ ತೊಳೆದು, ಕುಡಿದರೆ, ಹಲವು ರೋಗಗಳು ಅಂಟಿಕೊಳ್ಳಲಿವೆ’

-ಪ್ರೊ.ಚಂದ್ರಶೇಖರ ಪಾಟೀಲ , ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News