ದೇಶದ 13,511 ಗ್ರಾಮಗಳಲ್ಲಿ ಒಂದೇ ಒಂದು ಶಾಲೆ ಇಲ್ಲ!

Update: 2018-09-16 15:13 GMT

ಹೊಸದಿಲ್ಲಿ,ಸೆ.16: ಕೇಂದ್ರವು ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವತ್ರಿಕ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದರೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ವರದಿಯಂತೆ ದೇಶಾದ್ಯಂತ 13,511 ಗ್ರಾಮಗಳಲ್ಲಿ ಇನ್ನೂ ಒಂದೇ ಒಂದು ಶಾಲೆಯಿಲ್ಲ.

ಈ ಸ್ಥಿತಿಗೆ ರಾಜ್ಯ ಸರಕಾರಗಳ ಉದಾಸೀನದ ಧೋರಣೆ ಪ್ರಮುಖ ಕಾರಣವಾಗಿದೆ. ಅಲ್ಲದೆ ಕೆಲವು ಗ್ರಾಮಗಳು ಶಾಲೆಗಳನ್ನು ಸ್ಥಾಪಿಸಲು ಅಗತ್ಯ ಜನಸಂಖ್ಯೆಯನ್ನು ಹೊಂದಿಲ್ಲ ಎಂದು ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.

ಮಿಝೋರಾಂ ಪ್ರತಿಯೊಂದು ಗ್ರಾಮದಲ್ಲಿಯೂ ಶಾಲೆಯನ್ನು ಹೊಂದಿರುವ ಏಕೈಕ ರಾಜ್ಯವಾಗಿದೆ. ಈಶಾನ್ಯ ರಾಜ್ಯಗಳು ದೇಶದ ಇತರ ರಾಜ್ಯಗಳಿಗಿಂತ ಹೆಚ್ಚಿನ ಸಾಧನೆಯನ್ನು ಮಾಡಿವೆ. ಮೇಘಾಲಯದಲ್ಲಿ ಮಾತ್ರ ಶಾಲೆಯಿಲ್ಲದ 41 ಗ್ರಾಮಗಳಿದ್ದು, ಉಳಿದ ಈಶಾನ್ಯ ರಾಜ್ಯಗಳಲ್ಲಿ ಶಾಲೆಗಳಿಲ್ಲದ ಗ್ರಾಮಗಳ ಸಂಖ್ಯೆ ಎರಡಂಕಿಗಳನ್ನು ದಾಟಿಲ್ಲ.

ಉತ್ತರ ಪ್ರದೇಶವು ಶಾಲೆಗಳಿಲ್ಲದ ಅತ್ಯಂತ ಹೆಚ್ಚಿನ ಗ್ರಾಮಗಳನ್ನು ಹೊಂದಿದೆ. ವರದಿಯಲ್ಲಿ ಗೋವಾಕ್ಕೆ ಸಂಬಂಧಿಸಿದ ಅಂಕಿಅಂಶಗಳಿಲ್ಲ.

ವರದಿಯಲ್ಲಿನ ಅಂಶದ ಬಗ್ಗೆ ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನಾವು ಮೊದಲು ಗ್ರಾಮೀಣ ಮನೋಸ್ಥಿತಿಯನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಗ್ರಾಮೀಣ ಜನರು ಮಕ್ಕಳನ್ನು ಓದಿಸುವುದಕ್ಕಿಂತ ಹೆಚ್ಚಿನ ಆದ್ಯತೆಯನ್ನು ಕೃಷಿ ಅಥವಾ ಹಣ ಗಳಿಕೆಯ ಉದ್ಯೋಗಗಳಿಗೆ ನೀಡುತ್ತಾರೆ. ಹೀಗಾಗಿ ಶಾಲೆಗಳ ಸ್ಥಾಪನೆಗೆ ಈ ಜನರಿಗೆ ಮನದಟ್ಟು ಮಾಡುವುದು ಸ್ಥಳೀಯಾಡಳಿತ ಸಂಸ್ಥೆಗಳಿಗೂ ಕಷ್ಟವಾಗುತ್ತದೆ. ಶಾಲೆಗಳ ಸ್ಥಾಪನೆಗಿಂತ ತಮ್ಮ ಮಕ್ಕಳಿಗೆ ಉದ್ಯೋಗ ದೊರೆಯುವಂತಾಗಲು ಕೈಗಾರಿಕೆಗಳ ಸ್ಥಾಪನೆಯನ್ನು ಅವರು ಬೆಂಬಲಿಸುತ್ತಾರೆ. ಜನರ ಮನೋಸ್ಥಿತಿಯನ್ನು ಬದಲಿಸುವುದು ಮೊದಲ ಅಗತ್ಯವಾಗಿದೆ ಎಂದು ಹೈದರಾಬಾದ್‌ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರೊ.ಎಚ್.ಎಸ್.ಸೋಲಂಕಿ ಹೇಳಿದರೆ,ಗ್ರಾಮಗಳಲ್ಲಿ ಶಾಲೆಗಳು ತಲೆಯೆತ್ತಿದರೆ ಮಾತ್ರ ತಮ್ಮ ಮಕ್ಕಳನ್ನು ಓದಿಸಲು ಹೆತ್ತವರು ಉತ್ತೇಜಿತರಾಗುತ್ತಾರೆ ಎನ್ನುವುದು ಸಿಂಬಿಯೊಸಿಸ್ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್(ಗ್ರಾಮೀಣಾಭಿವೃದ್ದಿ)ನ ರಾಜೇಶ ಪಾಂಡಾ ಅವರ ವಾದವಾಗಿದೆ. ಈ ವರದಿಯು ನಿಖರವಾಗಿದ್ದರೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಿದ್ದರೆ ಮಾತ್ರ ಶಿಕ್ಷಣದ ಲಾಭಗಳನ್ನು ಹೆತ್ತವರಿಗೆ ಮನದಟ್ಟು ಮಾಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News