ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತಿಯಿಲ್ಲ: ಭಾಷಾ ಶಾಸ್ತ್ರಜ್ಞ ಡಾ.ಷ.ಶೆಟ್ಟರ್

Update: 2018-09-16 15:23 GMT

ಬೆಂಗಳೂರು, ಸೆ.16: ಅಧಿಕಾರ ಕೇಂದ್ರಿತ ಕ್ಷೇತ್ರಗಳಲ್ಲಿದ್ದಂತೆ ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತಿ ಎಂಬುದು ಇರುವುದಿಲ್ಲ ಎಂದು ಭಾಷಾ ಶಾಸ್ತ್ರಜ್ಞ ಡಾ.ಷ.ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಭಾರತೀಯ ವಿದ್ಯಾ ಭವನ ಮತ್ತು ವಿನಾಯಕ ಗೋಕಾಕ್ ವಾಜ್ಮಯ ಟ್ರಸ್ಟ್ ವತಿಯಿಂದ ಭಾರತೀಯ ವಿದ್ಯಾ ಭವನದ ಕೆ.ಆರ್.ಜಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರೊ.ವಿ.ಕೃ ಗೋಕಾಕ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ’ ಪ್ರಶಸ್ತಿ ಸ್ವೀಕರಿಸಿ ಅವರುಅವರು ಮಾತನಾಡಿದರು.

ದೇಶದಲ್ಲಿ ಆಡಳಿತ, ಶಿಕ್ಷಣ, ರಾಜಕೀಯ ಕ್ಷೇತ್ರಗಳಲ್ಲಿ ವಯಸ್ಸಾದ ನಂತರ ನಿವೃತ್ತಿ ಎಂಬುದು ಇರುತ್ತದೆ. ನಿವೃತ್ತಿಯ ನಂತರ ಏನು ಮಾಡಬೇಕು ಎಂಬ ಗೊಂದಲವಿರುತ್ತದೆ. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತಿ ಎಂಬುದೇ ಇಲ್ಲ. ಸಾಹಿತಿಗಳು ಎಲ್ಲ ರೀತಿಯಲ್ಲಿಯೂ ತಮ್ಮ ಬರವಣಿಗೆಯನ್ನು ಮುಂದುವರಿಸಬಹುದು ಎಂದು ಹೇಳಿದರು.

ಸಾಹಿತಿಯಾಗಿ ಅಲ್ಲದೆ, ಹಲವಾರು ಕ್ಷೇತ್ರಗಳಲ್ಲಿ ಗೋಕಾಕ್ ಗುರುತಿಸಿಕೊಂಡಿದ್ದರು. ಶೈಕ್ಷಣಿಕ ಮತ್ತು ಆಡಳಿತ ಕ್ಷೇತ್ರದಲ್ಲಿಯೂ ದುಡಿದಿದ್ದಾರೆ. ಆದರೆ, ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು. ಅವರು ದೊಡ್ಡ ದೊಡ್ಡ ಸಂಸ್ಥೆಯಲ್ಲಿದ್ದುಕೊಂಡೇ ಬೇರೆಯವರಿಗೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ, ಎಲ್ಲರನ್ನೂ ಇಷ್ಟಪಡುವ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು.

ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಗ್ರಂಥ ಬರೆದು ಪ್ರಸಿದ್ಧಿಯಾದವರು, ತಮ್ಮ ನಿವೃತ್ತಿ ನಂತರವೂ ಅದನ್ನು ಮುಂದುವರೆಸಿದರು. ಸತ್ಯಯುತವಾದ ಸಾಹಿತ್ಯಕ್ಕೆ ಮರಣವಿಲ್ಲ. ಅಂತಹ ಸಾಹಿತ್ಯ ಕೊಟ್ಟವರಿಗೂ ಮರಣವಿಲ್ಲ. ಮರಣವಿಲ್ಲದ ಸಾಹಿತ್ಯ ನೀಡಿದವರು ಗೋಕಾಕ್. ಅವರ ಕೃತಿ ಓದುವ ಮೂಲಕ ಅವರನ್ನು ನೆನೆಸಿಕೊಳ್ಳಬೇಕು. ಇಂತವರಿಂದ ಶಕ್ತಿ ಪಡೆದು ನಾವು ಇಂತಹುದೇ ಸಾಹಿತ್ಯ ರಚಿಸಲು ಹುಮ್ಮಸ್ಸನ್ನು ಹುಟ್ಟಿಸಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ ಸಿದ್ದರಾಮಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ ಗೋಕಾಕ್ ಅವರದು. ನವ್ಯಕಾವ್ಯ ಪರಂಪರೆಗೆ ನಾಂದಿ ಹಾಡಿದಂತಹ ಲೇಖನ ಕೊಟ್ಟವರು. ಕಾವ್ಯದ ನಿಟ್ಟನ್ನು ಬದಲಿಸುವ ರೀತಿ ಸಮುದ್ರ ಗೀತೆಯನ್ನು ರಚಿಸಿದರು ಎಂದು ನುಡಿದರು.

ವಾಸ್ತವ ರೀತಿಯಲ್ಲಿ ಸಮುದ್ರದ ತೆರೆಗಳ ಅಲೆಯನ್ನು ಕಟ್ಟಿಕೊಟ್ಟವರು. ಇಂತಹ ಗೋಕಾಕ್ ಅವರ ಪ್ರಶಸ್ತಿ ಡಾ.ಷ ಶೆಟ್ಟರ್ ಅವರಿಗೆ ಲಭಿಸುತ್ತಿದೆ. ಈ ಪ್ರಶಸ್ತಿ ಕರ್ತವ್ಯಪ್ರಜ್ಞೆ, ಪ್ರಾಮಾಣಿಕತೆ ಉಳ್ಳವರಿಗೆ ಸಲ್ಲುತ್ತದೆ. ಕಲಬುರ್ಗಿ ಮತ್ತು ಶೆಟ್ಟರ್ ಅವರು ಜನಪರವಾಗಿ ನೋಡುವ ದೃಷ್ಟಿ ಇಟ್ಟುಕೊಂಡಂತಹ ಸಂಶೋಧಕರು. ಉದ್ವೇಗವಿಲ್ಲದ ಹಾಗೂ ಬಹುತ್ವವವನ್ನು ಕಾಪಾಡುವ ಸಾಹಿತ್ಯವನ್ನು ಕಟ್ಟಿಕೊಟ್ಟವರು ಶೆಟ್ಟರ್ ಅವರು ಎಂದು ಶ್ಲಾಸಿದರು. ಕಾರ್ಯಕ್ರಮದಲ್ಲಿ ವಿನಾಯಕ ಗೋಕಾಕ್ ವಾಜ್ಮಯ ಟ್ರಸ್ಟ್ ಅಧ್ಯಕ್ಷ ವೈ.ಎನ್ ಗಂಗಾಧರ ಸೆಟ್ಟಿ, ಅನಿಲ್‌ಗೋಕಾಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News