ದೇವಾಂಗ ಸಮುದಾಯದ ಒಗ್ಗಟ್ಟಿನಿಂದ ರಾಜಕೀಯ ಅವಕಾಶ: ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ

Update: 2018-09-16 15:27 GMT

ಬೆಂಗಳೂರು, ಸೆ.16: ದೇವಾಂಗ ಸಮುದಾಯ ಒಗ್ಗಟ್ಟನ್ನು ಸಾಧಿಸುವ ಮೂಲಕ ರಾಜಕೀಯ ಅವಕಾಶಗಳನ್ನು ಪಡೆಯಲು ಮುಂದಾಗಬೇಕು ಎಂದು ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಆಶಿಸಿದರು.

ರವಿವಾರ ದೇವಾಂಗ ಸಂಘ ಹಾಗೂ ರಾಜ್ಯ ದೇವಾಂಗ ನೌಕರರ ಸಂಘ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವಾಂಗ ಸಮುದಾಯ ಸರ್ವತೋಮುಖ ಅಭಿವೃದ್ಧಿಗೆ ಸರಕಾರದ ಸೌಲಭ್ಯಗಳು ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಒಗ್ಗಟ್ಟಿನಿಂದ ಸರಕಾರದ ಮೇಲೆ ಒತ್ತಡ ಹಾಕಬೇಕು. ಹಾಗೂ ನಾಯಕರು ಹಾಕಿಕೊಟ್ಟ ದಾರಿಯಲ್ಲಿ ಯುವ ಸಮುದಾಯ ಒಗ್ಗಟ್ಟಿನಿಂದ ಮುನ್ನಡೆಯಬೇಕೆಂದು ಅವರು ಹೇಳಿದರು.

ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನೇಕಾರರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಸಮುದಾಯದ ಮುಖಂಡರು ಮುಂದಾಗಬೇಕು. ಈ ನಿಟ್ಟಿನಲ್ಲಿ ದೇವಾಂಗ ಸಂಘ ಹಾಗೂ ರಾಜ್ಯ ದೇವಾಂಗ ನೌಕರರ ಸಂಘ ಕಾರ್ಯಮಗ್ನರಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಾಂಗ ಸಮುದಾಯದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಅವರಿಗೆ ಪೋಷಕರು ಹಾಗೂ ಸಮುದಾಯದ ಮುಖಂಡರು ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಆದರೆ, ಯಾವುದೆ ಕಾರಣಕ್ಕೂ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬಾರದು ಎಂದು ಅವರು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಕೇವಲ ಸರಕಾರಿ ಹುದ್ದೆ ಪಡೆಯುವುದಕ್ಕಾಗಿ ಮಾತ್ರ ಒತ್ತಡ ಹಾಕಬಾರದು. ಮಕ್ಕಳು ತಮಗೆ ಆಸಕ್ತಿಯಿರುವ ಕ್ಷೇತ್ರಗಳಲ್ಲಿ ಉತ್ತಮ ಸಾಧಕರಾಗುವಂತೆ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕೆಂದು ತಿಳಿಸಿದರು.

ಇನ್ನು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಕೇವಲ ಅಂಕ ಗಳಿಸುವುದಕ್ಕಾಗಿ ಮಾತ್ರ ಸೀಮಿತಗೊಳಿಸಬಾರದು. ಪಠ್ಯೇತರ ಓದು, ಬರವಣಿಗೆ ಹಾಗೂ ಸಮುದಾಯದ ಕೆಲಸಗಳಲ್ಲಿ ಭಾಗಿಗಳಾಬೇಕು. ಇದರಿಂದ ವಿದ್ಯಾರ್ಥಿಗಳು ಸರ್ವತೋಮುಖವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಈ ವೇಳೆ ದೇವಾಂಗ ಜಗದ್ಗುರು ದಯಾನಂದಪುರಿ ಸ್ವಾಮೀಜಿ, ದೇವಾಂಗ ಸಂಘದ ಅಧ್ಯಕ್ಷ ಸೂರ್ಯನಾರಾಯಣ, ನಿವೃತ್ತ ಜಿಲ್ಲಾಧಿಕಾರಿ ನಾಗರಾಜ್, ರಾಜ್ಯ ದೇವಾಂಗ ನೌಕರರ ಸಂಘದ ಅಧ್ಯಕ್ಷ ಸುರೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News