ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅಂದೋಲನ: ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ

Update: 2018-09-16 15:29 GMT

ಬೆಂಗಳೂರು, ಸೆ.15: ನಟ ವಿಷ್ಣುವರ್ಧನ್‌ರವರ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರಕಾರಕ್ಕೆ ಸ್ವಅಕ್ಷರದಲ್ಲಿ ಪತ್ರ ಬರೆಯುವ ಮೂಲಕ ಅಂದೋಲನ ಮಾಡಬೇಕು ಎಂದು ಪದ್ಮಶ್ರೀ ಪುರಸ್ಕೃತ ಕವಿ ದೊಡ್ಡರಂಗೇಗೌಡ ತಿಳಿಸಿದರು.

ರವಿವಾರ ಡಾ.ವಿಷ್ಣು ಸೇನಾ ಸಮಿತಿ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜನತೆ ವಿಷ್ಣುವರ್ಧನ್ ಸ್ಮಾರಕಕ್ಕೆ ಆಗ್ರಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಡಾ.ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ಅಂದೋಲನ ಪ್ರಾರಂಭವಾಗಲಿ ಎಂದು ತಿಳಿಸಿದರು.

ನಟ ವಿಷ್ಣುವರ್ಧನ್ ಕನ್ನಡ ಕಲಾ ಪ್ರಪಂಚದಲ್ಲಿ ದೊಡ್ಡ ಆಲದ ಮರ ವಿದ್ದಂತೆ. ಅವರು ಅಭಿನಯಿಸಿದ ಹಲವು ಸಿನೆಮಾಗಳು ರಾಷ್ಟ್ರ ಮಟ್ಟದಲ್ಲಿ ಜನಪ್ರಿಯಗೊಂಡಿವೆ. ಹೀಗಾಗಿ ದೇಶಾದ್ಯಂತ ಅವರ ಅಭಿಮಾನಿಗಳು ಇರುವುದರಿಂದ ಮುಂಬೈ ಸೇರಿದಂತೆ ವಿವಿಧೆಡೆ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಮಾಡಬೇಕು ಎಂದು ಅವರು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ, ನಟ ಡಾ.ವಿಷ್ಣುವರ್ಧನ್ ಕನ್ನಡ ನಾಡಿನ ಹೆಮ್ಮೆಯ ಪುತ್ರರಾಗಿದ್ದರು. ನಾಡು, ನುಡಿ ಸಂಸ್ಕೃತಿಯನ್ನು ಸಿನೆಮಾಗಳ ಮೂಲಕ ಜನತೆಯ ಮನಸಿನಲ್ಲಿ ಮೂಡುವಂತೆ ಮಾಡಿದ್ದಾರೆ. ಹೀಗಾಗಿ ಸಮಾಧಿಯನ್ನು ಸ್ಮಾರಕವಾಗಿ ರೂಪಿಸಲು ಸರಕಾರ ಶೀಘ್ರವೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಳೀಯರಿಗಿದ್ದ ಅವಕಾಶವನ್ನು ಕಿತ್ತುಕೊಂಡು, ಹಿಂದಿ ಭಾಷಿಕರನ್ನು ಕೂರಿಸಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಉದಯ್ ಗರುಡಾಚಾರ್, ನಟ ಸುದೀಪ್, ನಿರ್ದೇಶಕ ನಾಗೇಂದ್ರ ಸಿಂಗ್ ಬಾಬು, ಹಿರಿಯ ಪತ್ರಕರ್ತರಾದ ರವಿ ಹೆಗಡೆ, ಗಿರೀಶ್ ರಾವ್, ಸದಾಶಿವ ಶೆಣೈ, ರವಿ ಶ್ರೀವತ್ಸಾ, ಚಂದ್ರಚೂಡಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News