ಸಹಕಾರಿ ಬ್ಯಾಂಕ್‌ಗಳು ಜನಸ್ನೇಹಿಯಾಗಿರಲಿ: ರಾಜ್ಯಪಾಲ ವಜೂಭಾಯಿ ವಾಲಾ

Update: 2018-09-16 15:32 GMT

ಬೆಂಗಳೂರು, ಸೆ.16: ಸಹಕಾರಿ ಬ್ಯಾಂಕ್‌ಗಳು ಲಾಭ ಗಳಿಸುವ ಸಂಸ್ಥೆಗಳಾಗುವ ಬದಲಿಗೆ, ಜನಪರವಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅಭಿಪ್ರಾಯಿಸಿದ್ದಾರೆ.

ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ದಿ ಮೈಸೂರು ಸಿಲ್ಕ್ ಕ್ಲಾತ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‌ನ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿರುವ ಹಲವು ಖಾಸಗಿ ಬ್ಯಾಂಕ್‌ಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು ಲಾಭ ಮಾಡುವ ಉದ್ದೇಶವನ್ನು ಹೊಂದಿರುತ್ತವೆ. ಆದರೆ, ಸಹಕಾರಿ ಬ್ಯಾಂಕ್‌ಗಳು ಜನರಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ಹೀಗಾಗಿ, ಗ್ರಾಹಕರ ಸಮಸ್ಯೆಯನ್ನು ಆಲಿಸಿ ಅವರಿಗೆ ಸಹಾಯ ಮಾಡುವುದು ಸಹಕಾರಿ ಬ್ಯಾಂಕ್‌ಗಳ ಕರ್ತವ್ಯವಾಗಬೇಕು ಎಂದು ಅವರು ಹೇಳಿದರು.

ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸಹಕಾರಿ ಕ್ಷೇತ್ರ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರಿಂದ ಕೋಟ್ಯಾಂತರ ಕುಟುಂಬಕ್ಕೆ ಅನುಕೂಲವಾಗುತ್ತಿದೆ. ಶ್ರೀಮಂತರಿಂದ ಹಣ ಪಡೆದು ಬಡವರಿಗೆ ಸಾಲದ ರೂಪದಲ್ಲಿ ಸಹಾಯ ಮಾಡುವುದೇ ಸಹಕಾರಿ ಕ್ಷೇತ್ರ ಆದ್ಯತೆಯಾಗಬೇಕು ಎಂದ ಅವರು, ಬಡವರು, ಕೂಲಿಕಾರರು, ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದವರು ಸಾಲ ತೀರಿಸುವಲ್ಲಿ ತೋರುವ ಬದ್ಧತೆ ಮತ್ತು ಪ್ರಾಮಾಣಿಕತೆ ಉಳ್ಳವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಶ್ರೀಮಂತರು ಅದನ್ನು ಮರು ಪಾವತಿ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ, ಸಹಕಾರಿ ಸಂಘಗಳಲ್ಲಿ ಸಾಲ ಪಡೆಯುವ ಆಟೋ ಚಾಲಕ, ವ್ಯಾಪಾರಿ, ಸಣ್ಣ ಕೈಗಾರಿಕೆ ನಡೆಸುವವರು, ಲಾರಿ ಮಾಲಕರು-ಚಾಲಕರು ಸಹಕಾರಿ ಸಂಘಗಳಲ್ಲಿ ಪಡೆಯುವ ಸಾಲವನ್ನು ಚಾಚೂ ತಪ್ಪದೇ ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಾರೆ ಎಂದು ವಾಲಾ ತಿಳಿಸಿದರು.

ನಿಮ್ಮ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿಟ್ಟರೆ ಅದಕ್ಕೆ ಭದ್ರತೆ ನೀಡಲು ಸಾಧ್ಯವಾಗುವುದಿಲ್ಲ. ಅದನ್ನೇ ಸಹಕಾರಿ ಬ್ಯಾಂಕ್‌ನಲ್ಲಿಟ್ಟರೆ ಸರಕಾರ ಅದಕ್ಕೆ ಭದ್ರತೆ ನೀಡುತ್ತದೆ. ಒಂದು ವೇಳೆ ಬ್ಯಾಂಕ್ ನಾಶವಾದರೂ, ಇನ್ಸೂರೆನ್ಸ್ ರೂಪದಲ್ಲಿ ನಿಮ್ಮ ಹಣ ನಿಮಗೆ ಸಿಗುತ್ತದೆ ಎಂದ ಅವರು, ಸಹಕಾರಿ ಕ್ಷೇತ್ರ ಬಡವರಿಗೆ ಉದ್ಯೋಗ ಕಲ್ಪಿಸಿ ಕೊಡುವಲ್ಲಿ ಸಾಕಷ್ಟು ಮುಂದಿದೆ ಎಂದು ಬಣ್ಣಿಸಿದರು.

ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಭಾರತದ ಸಹಕಾರಿ ಕ್ಷೇತ್ರದಲ್ಲಿ ಗುಜರಾತ್ ಸಾಕಷ್ಟು ಮುಂದಿದೆ. ಸಮ್ಮಿಶ್ರ ಸರಕಾರವು ಅಧಿಕಾರಕ್ಕೆ ಬಂದ ನಂತರ ಹಾಗೂ ಹಿಂದಿನ ಸರಕಾರ ಮನ್ನಾ ಮಾಡಿರುವ ಸಾಲ ಸೇರಿದಂತೆ ಒಟ್ಟಾರೆಯಾಗಿ ಸಹಕಾರಿ ಕ್ಷೇತ್ರದ 19 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದೇವೆ. ಅಲ್ಲದೆ, 30 ಸಾವಿರ ಕೋಟಿಯಷ್ಟು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಲಾಗಿದೆ ಎಂದು ವಿವರಿಸಿದರು.

ರಾಜ್ಯದ ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಬಡವರ ಬಂಧು ಯೋಜನೆಯಡಿ ಯಾವುದೇ ದಾಖಲೆ ಇಲ್ಲದೇ 10 ಸಾವಿರದ ವರೆಗೂ ಬಡ್ಡಿ ರಹಿತ ಸಾಲ ನೀಡುತ್ತೇವೆ. ಮೊದಲ ಹಂತದಲ್ಲಿ 50 ಸಾವಿರ ಬೀದಿ ವ್ಯಾಪಾರಿಗಳು ಅನುಕೂಲ ಪಡೆಯಲಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಹಾಗೂ ಹಣಕಾಸು ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿರುವ ಸಹಕಾರಿ ಬ್ಯಾಂಕ್ ನಲ್ಲಿ ಸರಕಾರದ ಹಣ ಠೇವಣಿ ಇಡುವ ಬಗ್ಗೆ ಯೋಚನೆ ನಡೆಸುತ್ತಿದ್ದೇವೆ. ಈ ಸಂಬಂದ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎನ್.ಎಸ್.ಶ್ರೀನಿವಾಸ ಮೂರ್ತಿ, ಉಪಾಧ್ಯಕ್ಷ ಆರ್.ಪಿ. ರವಿಶಂಕರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ.ಕೃಷ್ಣ ಭಗವಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News