ಬಿಬಿಎಂಪಿ: ಪಾಲಿಕೆ ಬಝಾರ್ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಬೀದಿ ವ್ಯಾಪಾರಿಗಳ ಆಕ್ರೋಶ

Update: 2018-09-16 15:34 GMT

ಬೆಂಗಳೂರು, ಸೆ.16: ಬೀದಿ ಬದಿಯ ವ್ಯಾಪಾರಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬಿಬಿಎಂಪಿ ವತಿಯಿಂದ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಪಾಲಿಕೆ ಬಜಾರ್ ನಿರ್ಮಾಣ ವಿಳಂಭ ಗತಿಯಲ್ಲಿ ಸಾಗುತ್ತಿರುವುದಕ್ಕೆ ಸಾರ್ವಜನಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿರುವ ಪಾಲಿಕೆ ಬಜಾರ್ ರೀತಿಯಲ್ಲಿಯೇ ಇಲ್ಲಿನ ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ‘ಮಾದರಿ ಪಾಲಿಕೆ ಬಜಾರ್’ ನಿರ್ಮಾಣ ಕಾಮಗಾರಿಗೆ ಕಳೆದ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಈ ಯೋಜನೆಗೆ ಸಾಕಷ್ಟು ಪರ-ವಿರೋಧವೂ ವ್ಯಕ್ತವಾಗಿತ್ತು. ಹಲವಾರು ವಿರೋಧಗಳ ನಡುವೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಐದು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಆರು ತಿಂಗಳಲ್ಲಿ 42 ಮಳಿಗೆಗಳು ನಿರ್ಮಾಣವಾಗಲಿದೆ ಎಂದು ಬೋರ್ಡ್ ಹಾಕಲಾಗಿದೆ. ಆದರೆ, ಕಾಮಗಾರಿ ಆರಂಭಗೊಂಡು 8-9 ತಿಂಗಳು ಕಳೆದರೂ ಇನ್ನು ಪೂರ್ಣಗೊಂಡಿಲ್ಲ. ಇನ್ನೂ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಿದೆ. ವಿಜಯನಗರ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್ ಕಾಮುಕರ ಕಾಟದಿಂದ ಜನರ ಓಡಾಟವೇ ಇಲ್ಲದೇ ಪಾಳುಬಿದ್ದಿತ್ತು. ಹೀಗಾಗಿ, ಅಲ್ಲಿ ಪಾಲಿಕೆ ಬಜಾರ್ ಕಾಮಗಾರಿ ನಿರ್ಮಾಣ ಮಾಡಲು ಪಾಲಿಕೆ ಮುಂದಾಗಿತ್ತು.

ಬಜಾರ್ ನಿರ್ಮಾಣ ಮಾಡುವ ಜಾಗದಲ್ಲಿ ಸರಿ ಸುಮಾರು 150-170ಕ್ಕೂ ಅಧಿಕ ಬೀದಿ ವ್ಯಾಪಾರಿಗಳು ಇದ್ದಾರೆ. ಅಂಗಡಿ ಮುಂಗಟ್ಟುಗಳಲ್ಲಿ ಕಾಮಗಾರಿಗಾಗಿ ಸ್ಥಳ ಅಗೆದಿರುವುದರಿಂದ ರಸ್ತೆ ಕಿರಿದಾಗಿದೆ. ಇದರಿಂದ ಸರಿಯಾಗಿ ವ್ಯಾಪಾರವಾಗದೇ ಬೀದಿ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಿಯಾದ ಸಮಯಕ್ಕೆ ಕಾಮಗಾರಿ ಮುಗಿಸದೇ ನಿಧಾನಗತಿ ಮಾಡುತ್ತಿರೋದೇ ನಮ್ಮ ಕಷ್ಟಕ್ಕೆ ಕಾರಣ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟು 18 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ ಪಾಲಿಕೆ ಬಜಾರ್ ನಿರ್ಮಿಸಲು ನಗರೋತ್ಥಾನ ಅನುದಾನದಲ್ಲಿ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಮಳೆಗಾಲ ಸೇರಿದಂತೆ 6 ತಿಂಗಳ ಸಮಯ ನಿಗದಿ ಮಾಡಲಾಗಿದೆ. ಆದರೆ ವಾಟರ್ ಲೈನ್, ಒಎಫ್ಸಿ ಕೇಬಲ್, ಮ್ಯಾನ್‌ಹೋಲ್‌ಗಳೆಲ್ಲಾ ಇದ್ದುದರಿಂದ ಕಾಮಗಾರಿ ಪೂರ್ಣಗೊಳ್ಳಲು ತಡವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೈಟೆಕ್ ಬಜಾರ್‌ನಲ್ಲಿ ಬಿಬಿಎಂಪಿ ಬೀದಿ ವ್ಯಾಪಾರಿಗಳು ಫಲಾನುಭವಿಗಳು ಆಗಿದ್ದು, ಆರ್‌ಟಿಐ ಮೂಲಕ ಮೊದಲ ಹಂತದ ಫಲಾನುಭವಿಗಳ ಪಟ್ಟಿ ತರಿಸಿಕೊಂಡಿದ್ದು, ಅದರಲ್ಲಿನ ಒಟ್ಟು 30 ಜನರು ಫಲಾನುಭವಿಗಳಿದ್ದಾರೆ. ಆದರೆ, ಈ ಪಟ್ಟಿಯಲ್ಲಿ 6-7 ಜನ ಬಿಟ್ಟರೆ, ಬೇರೆಯವರೆನ್ನೆಲ್ಲ ಬೀದಿ ವ್ಯಾಪಾರಿಗಳು ಎಂದು ಸೇರ್ಪಡೆ ಮಾಡಲಾಗಿದೆ ಎಂದು ಬಾಬು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News