ಪಾಕಿಸ್ತಾನಕ್ಕೆ ಸುಲಭ ಗೆಲುವು

Update: 2018-09-16 18:20 GMT

ದುಬೈ, ಸೆ.16: ಏಶ್ಯಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹಾಂಕಾಂಗ್ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೂಟದಲ್ಲಿ ತನ್ನ ಅಭಿಯಾನ ಆರಂಭಿಸಿದೆ.

 ಇಲ್ಲಿನ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 117 ರನ್ ಗುರಿ ಪಡೆದ ಪಾಕಿಸ್ತಾನ 23.4 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 120 ರನ್ ಗಳಿಸಿತು. ಆರಂಭಿಕ ಆಟಗಾರ ಇಮಾಮ್-ವುಲ್-ಹಕ್ ಔಟಾಗದೆ 50 ರನ್ ಗಳಿಸಿದರು. ಬಾಬರ್ ಆಝಂ(33) ಹಾಗೂ ಫಖರ್ ಝಮಾನ್(24) ಗೆಲುವಿಗೆ ಕಾಣಿಕೆ ನೀಡಿದ್ದಾರೆ.

ಇನಿಂಗ್ಸ್ ಆರಂಭಿಸಿದ ಝಮಾನ್ ಹಾಗೂ ಹಕ್ ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 41 ರನ್ ಸೇರಿಸಿದರು. ಈ ಜೋಡಿಯನ್ನು ಎಹ್ಸಾನ್ ಖಾನ್ ಬೇರ್ಪಡಿಸಿದರು. ಹಕ್‌ರೊಂದಿಗೆ ಕೈಜೋಡಿಸಿದ ಆಝಂ 2ನೇ ವಿಕೆಟ್‌ಗೆ 52 ರನ್ ಸೇರಿಸಿ ಪಾಕ್‌ಗೆ ಸುಲಭ ಗೆಲುವು ಖಚಿತಪಡಿಸಿದರು. 36 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದ ಆಝಂಗೆ ಎಹ್ಸಾನ್ ಖಾನ್ ಪೆವಿಲಿಯನ್ ಹಾದಿ ತೋರಿಸಿದರು. 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 27 ರನ್ ಸೇರಿಸಿದ ಹಕ್ ಹಾಗೂ ಶುಐಬ್ ಮಲಿಕ್(9)ತಂಡಕ್ಕೆ ಇನ್ನೂ 158 ಎಸೆತಗಳು ಬಾಕಿ ಇರುವಂತೆಯೇ ಗೆಲುವು ತಂದರು.

23.3ನೇ ಓವರ್‌ನಲ್ಲಿ ಏಝಾಝ್ ಖಾನ್ ಎಸೆತದಲ್ಲಿ ಬೌಂಡರಿ ಬಾರಿಸಿದ ಹಕ್ 69 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಇದರಲ್ಲಿ 3 ಬೌಂಡರಿ, 1 ಸಿಕ್ಸರ್ ಇದೆ.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಹಾಂಕಾಂಗ್ ತಂಡ ಉಸ್ಮಾನ್ ಖಾನ್(19ಕ್ಕೆ 3), ಹಸನ್ ಅಲಿ(19ಕ್ಕೆ 2) ಹಾಗೂ ಶಾದಾಬ್ ಖಾನ್(31ಕ್ಕೆ2) ದಾಳಿಗೆ ಕಂಗಾಲಾಗಿ 37.1 ಓವರ್‌ಗಳಲ್ಲಿ 116 ರನ್ ಗಳಿಸಿ ಆಲೌಟಾಯಿತು.

 ಹಾಂಕಾಂಗ್ ಪರ ಅಝಾಝ್ ಖಾನ್(27), ದೇವಂಗ್ ಶಾ(26)ಹಾಗೂ ನಾಯಕ ಅಂಶುಮಾನ್ ರಾಥ್(19) ಎರಡಂಕೆಯ ಸ್ಕೋರ್ ಗಳಿಸಿದರು. ಹಾಂಕಾಂಗ್ 44 ರನ್‌ಗೆ 5 ವಿಕೆಟ್ ಕಳೆದುಕೊಂಡಿತು. ಆಗ ಜೊತೆಯಾದ ಖಾನ್ ಹಾಗೂ ಶಾ 6ನೇ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿದರು. ಆದರೆ, ಈ ಇಬ್ಬರು ಬೇರ್ಪಟ್ಟ ಬಳಿಕ ಹಾಂಕಾಂಗ್ ಕುಸಿತದ ಹಾದಿ ಹಿಡಿಯಿತು. ಉಸ್ಮಾನ್ ಖಾನ್ ಹಾಂಕಾಂಗ್‌ನ ಕೆಳ ಕ್ರಮಾಂಕದ ದಾಂಡಿಗರಿಗೆ ಪೆವಿಲಿಯನ್ ಹಾದಿ ತೋರಿಸಿದರು. 2004ರ ಆವೃತ್ತಿಯ ಏಶ್ಯಕಪ್‌ನಲ್ಲಿ ಭಾಗವಹಿಸಿದ್ದ ಹಾಂಕಾಂಗ್ ಇದೀಗ ಎರಡನೇ ಬಾರಿ ಟೂರ್ನಿಯಲ್ಲಿ ಕಾಣಿಸಿ ಕೊಂಡಿದೆ. 2012ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಶ್ಯಕಪ್‌ನಲ್ಲಿ ಕೊನೆಯ ಬಾರಿ ಪ್ರಶಸ್ತಿ ಎತ್ತಿ ಹಿಡಿದಿರುವ ಎರಡು ಬಾರಿಯ ಚಾಂಪಿಯನ್ ಪಾಕ್‌ಗೆ ಈ ಬಾರಿ ಮತ್ತೊಂದು ಪ್ರಶಸ್ತಿ ಎತ್ತುವ ಅವಕಾಶವಿದೆ. ಏಕೆಂದರೆ ಪಾಕಿಸ್ತಾನ 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಉಗ್ರಗಾಮಿಗಳ ದಾಳಿ ನಡೆದ ಬಳಿಕ ತನ್ನ ತವರಿನ ಪಂದ್ಯಗಳನ್ನು ದುಬೈ, ಅಬುಧಾಬಿ ಹಾಗೂ ಶಾರ್ಜಾಗಳಲ್ಲಿ ಆಡುತ್ತಿದೆ. ಹಾಂಕಾಂಗ್ ತಂಡ ‘ಎ’ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಭಾರತದೊಂದಿಗೆ ಸ್ಥಾನ ಪಡೆದಿದೆ. ಅರ್ಹತಾ ಟೂರ್ನಿಯ ಫೈನಲ್‌ನಲ್ಲಿ ಯುಎಇ ತಂಡವನ್ನು ಮಣಿಸಿದ್ದ ಹಾಂಕಾಂಗ್ ಏಶ್ಯಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News