ಮನೋಹರ್ ಪಾರಿಕ್ಕರ್ ಗೆ ಅಸೌಖ್ಯ: ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್

Update: 2018-09-17 12:26 GMT

ಪಣಜಿ,ಸೆ.19 : ಅಸೌಖ್ಯದಿಂದಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿರುವುದರಿಂದ ಗೋವಾದ ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್ ಇಂದು ರಾಜ್ಯಪಾಲೆ ಮೃದುಲಾ ಸಿನ್ಹಾಅವರಿಗೆ ಮನವಿ ಸಲ್ಲಿಸಿ ಪರ್ಯಾಯ ಸರಕಾರ ರಚಿಸಲು ತನ್ನ ಹಕ್ಕು ಮಂಡಿಸಿದೆ.

ಪಕ್ಷಕ್ಕೆ ಅವಕಾಶ ನೀಡಿದರೆ ಸದನದಲ್ಲಿ ಬಹುಮತ ಸಾಬೀತು ಪಡಿಸುವುದು ಎಂದೂ ಪಕ್ಷ ರಾಜ್ಯಪಾಲರಿಗೆ ತಿಳಿಸಿದೆ.

ಮುಖ್ಯಮಂತ್ರಿಯ ಅಸೌಖ್ಯದಿಂದಾಗಿ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಲು ಬಿಜೆಪಿ ಹೈಕಮಾಂಡ್ ತನ್ನ ಮೂವರು ಹಿರಿಯ ನಾಯಕರಾದ ರಾಮ್ ಲಾಲ್, ಬಿ ಎಲ್ ಸಂತೋಷ್ ಹಾಗೂ ವಿನಯ್ ಪುರಾಣಿಕ್ ಅವರನ್ನು ಪಣಜಿಗೆ ಕಳುಹಿಸಿದ ಸಂದರ್ಭ ಈ ಬೆಳವಣಿಗೆ ನಡೆದಿದೆ. ಪಾರಿಕ್ಕರ್ ಅವರು ಸದ್ಯ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಲ್ವತ್ತು ಸದಸ್ಯರ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 16 ಸದಸ್ಯರಿದ್ದು  ಪಕ್ಷಕ್ಕೆ ಸರಕಾರ ರಚಿಸಲು ಆಹ್ವಾನಿಸಬೇಕೆಂದು ಆಗ್ರಹಿಸಲಾಗಿದೆ ಎಂದು ವಿಪಕ್ಷ ನಾಯಕ ಚಂದ್ರಕಾಂತ್ ಕವ್ಲೇಕರ್ ಹೇಳಿದ್ದಾರೆ.

ಬಿಜೆಪಿಗೆ ರಾಜ್ಯದಲ್ಲಿ 14 ಸದಸ್ಯರ ಬಲವಿದ್ದು ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಎಂಜಿಪಿ ಜತೆ ಅದು ಮೈತ್ರಿ ಸಾಧಿಸಿದೆ. ಈ ಪಕ್ಷಗಳ ಹೊರತಾಗಿ ಮೂವರು ಪಕ್ಷೇತರ ಶಾಸಕರು ಹಾಗೂ ಎನ್‍ಸಿಪಿಯ ಒಬ್ಬ ಶಾಸಕ ಕೂಡಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗದಲ್ಲಿ ಎಲ್ಲಾ 16 ಪಕ್ಷದ ಶಾಸಕರಿದ್ದರು. ರಾಜ್ಯದ ಆಡಳಿತ ಮೈತ್ರಿಕೂಟದಲ್ಲಿ ಸಹಮತವಿಲ್ಲದೇ ಇರುವುದರಿಂದ ವಿಧಾನಸಭೆ ವಿಸರ್ಜಿಸದಂತೆ ನಿಯೋಗ ರಾಜ್ಯಪಾಲರಿಗೆಮನವಿ ಮಾಡಿದೆ.

ಗೋವಾ ಸರಕಾರ ಸ್ಥಿರವಾಗಿದ್ದು ನಾಯಕತ್ವ ಬದಲಾವಣೆಗೆ ಯಾವುದೇ ಆಗ್ರಹವಿಲ್ಲ ಎಂದು ಬಿಜೆಪಿ ನಾಯಕ ರಾಮ್ ಲಾಲ್ ಈ ಹಿಂದೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News