ತ್ರಿಪುರ ಪಂಚಾಯತ್ ಉಪ ಚುನಾವಣೆ: ಶೇ. 96 ಸ್ಥಾನಗಳಲ್ಲಿ ಬಿಜೆಪಿ ಅವಿರೋಧ ಆಯ್ಕೆ

Update: 2018-09-18 16:14 GMT

ಅಗರ್ತಲಾ, ಸೆ. 18: ತ್ರಿಪುರಾದಲ್ಲಿ ಸೆಪ್ಟಂಬರ್ 30ರಂದು ನಡೆಸಲಾಗುವ ಮೂರು ಹಂತದ ಪಂಚಾಯತ್ ಉಪ ಚುನಾವಣೆಯಲ್ಲಿ ಶೇ. 96 ಸ್ಥಾನಗಳಲ್ಲಿ ಬಿಜೆಪಿ ಅವಿರೋಧವಾಗಿ ಜಯ ಗಳಿಸಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಕೆ. ರಾವ್ ಮಂಗಳವಾರ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಹಾಗೂ ಐಪಿಎಫ್‌ಟಿ (ಇಂಡಿಜೀನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ) ಮೈತ್ರಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಗ್ರಾಮ ಪಂಚಾಯತ್‌ಗಳು, ಪಂಚಾಯತ್ ಸಮಿತಿಗಳು ಹಾಗೂ ಜಿಲ್ಲಾ ಪರಿಷತ್‌ಗಳ ದೊಡ್ಡ ಸಂಖ್ಯೆಯ ಸದಸ್ಯರು ರಾಜೀನಾಮೆ ನೀಡಿದ್ದರು. ಇದರಿಂದ 3,000 ಹುದ್ದೆ ಖಾಲಿ ಬಿದ್ದಿವೆ.

 ಬಿಜೆಪಿ ಆಯ್ಕೆಯಾದ ಅಭ್ಯರ್ಥಿಗಳು ರಾಜೀನಾಮೆ ನೀಡುವಂತೆ ಬಲವಂತಪಡಿಸಲಾಗುತ್ತಿದೆ ಹಾಗೂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಪ್ರತಿಪಕ್ಷ ಹಾಗೂ ಐಪಿಎಫ್‌ಟಿ ಆರೋಪಿಸಿದೆ. ಗ್ರಾಮ ಪಂಚಾಯತ್‌ನ 3,207 ಸ್ಥಾನ, ಪಂಚಾಯತ್ ಸಮಿತಿಯ 161 ಸ್ಥಾನ, ಜಿಲ್ಲಾ ಪರಿಷದ್‌ನ 18 ಸ್ಥಾನಗಳಿಗೆ ಸೆಪ್ಟಂಬರ್‌ನಲ್ಲಿ ಉಪ ಚುನಾವಣೆ ನಡೆಸಲು ನಿಗದಿಪಡಿಸಲಾಗಿದೆ. ಆದಾಗ್ಯೂ, ಈ ಸ್ಥಾನಗಳಲ್ಲಿ 3,247 ಸ್ಥಾನಗಳಲ್ಲಿ ಬಿಜೆಪಿ ಅವಿರೋಧವಾಗಿ (ಪ್ರತಿಸ್ಪರ್ಧಿ ಇಲ್ಲ) ಜಯ ಗಳಿಸಲಿದೆ. ‘‘ಗ್ರಾಮ ಪಂಚಾಯತ್‌ನ 132 ಸ್ಥಾನಗಳು, ಪಂಚಾಯತ್ ಸಮಿತಿಯ 7 ಸ್ಥಾನಗಳಿಗೆ ಮಾತ್ರ ಸೆಪ್ಟಂಬರ್ 30ರಂದು ಚುನಾವಣೆ ನಡೆಯಲಿದೆ. ಉಳಿದ ಸ್ಥಾನಗಳಲ್ಲಿ ಬಿಜೆಪಿ ಅವಿರೋಧವಾಗಿ ಜಯ ಗಳಿಸಲಿದೆ.’’ ಎಂದು ರಾವ್ ಹೇಳಿದ್ದಾರೆ.

ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬಿಜೆಪಿ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಚುನಾವಣೆ ಮುಂದೂಡುವಂತೆ ಪ್ರತಿಪಕ್ಷ ಹಾಗೂ ಐಪಿಎಫ್‌ಟಿ ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾವ್, ನಾಮಪತ್ರ ಸಲ್ಲಿಸುವ ಎಲ್ಲ ಕಚೇರಿಗಳಲ್ಲಿ ಯಾವುದೇ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿಲ್ಲ. ಆದುದರಿಂದ ಅದು ಸಾಧ್ಯವಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News