ಏಷ್ಯಾಕಪ್: ಭಾರತಕ್ಕೆ ಹಾಂಕಾಂಗ್ ವಿರುದ್ಧ ಪ್ರಯಾಸದ ಜಯ

Update: 2018-09-19 03:52 GMT

ದುಬೈ, ಸೆ. 19: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಭರವಸೆ ಹುಟ್ಟಿಸಿದ್ದ ಕ್ರಿಕೆಟ್ ಶಿಶು ಹಾಂಕಾಂಗ್ ಕೊನೆಗೂ ಬಲಿಷ್ಠ ಭಾರತದ ವಿರುದ್ಧ 26 ರನ್ನುಗಳ ವೀರೋಚಿತ ಸೋಲು ಕಂಡಿತು.

ಹಾಂಕಾಂಗ್‌ನ ಆರಂಭಿಕ ದಾಂಡಿಗರಾದ ನಿಝಾಕತ್ ಖಾನ್ ಹಾಗೂ ಅಂಶುಮನ್ ರಾಥ್ ದಾಖಲೆಯ 174 ರನ್ನುಗಳನ್ನು ಮೊದಲ ವಿಕೆಟ್‌ಗೆ ಸೇರಿಸಿ ಭಾರತೀಯ ಪಾಳಯದಲ್ಲಿ ನಡುಕ ಹುಟ್ಟುಸಿದ್ದರು. ಕೊನೆಗೂ ಚೈನಮನ್ ಪರಿಣಿತ ಕುಲದೀಪ್ ಯಾದವ್ ಈ ಅಪಾಯಕಾರಿ ಜೋಡಿಯನ್ನು ಮುರಿದು ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು.

ಒಂದು ಹಂತದಲ್ಲಿ ಗೆಲುವಿಗೆ 286 ರನ್ನುಗಳ ಸವಾಲು ಪಡೆದ ಹಾಂಕಾಂಗ್ ಕೊನೆಯ 25 ಓವರ್‌ಗಳಲ್ಲಿ ಎಲ್ಲ 10 ವಿಕೆಟ್ ಕೈಯಲ್ಲಿರುವಾಗ 156 ರನ್ನುಗಳನ್ನಷ್ಟೇ ಗಳಿಸಬೇಕಿತ್ತು. ನಿಝಾಕತ್ ಅವರ 92 ಹಾಗೂ ರಾಥ್ ಅವರ 73 ರನ್ನುಗಳ ಎದುರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ ಶಿಖರ್ ಧವನ್ (127 ಎಸೆತಗಳಲ್ಲಿ 120) ಮಂಕಾಗಿ ಕಂಡಿತು.

35ನೇ ಓವರ್‌ನಲ್ಲಿ ರಾಥ್, ಕುಲದೀಪ್ ಯಾದವ್ ಅವರ ಎಸೆತವನ್ನು ಎಕ್ಸ್‌ಟ್ರಾ ಕವರ್‌ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡುವ ಮೂಲಕ ಔಟಾದರು. ಮೊದಲ ಪಂದ್ಯ ಆಡುತ್ತಿರುವ ಖಲೀಲ್ ಅಹ್ಮದ್ ಮುಂದಿನ ಓವರ್‌ನಲ್ಲೇ ನಿಝಾಖರ್ ಅವರನ್ನು ಬಲೆಗೆ ಬೀಳಿಸಿ ಭಾರತದ ವಿಜಯದ ಬಾಗಿಲು ತೆರೆಯಿತು.

ಸ್ಪಿನ್ನರ್ ಯಜುವೇಂದ್ರ ಚಹಲ್ (3/46) ಮುಂದಿನ ಕೆಲಸ ಮಾಡಿದರು. ಮೊದಲ ಪಂದ್ಯದಲ್ಲೇ ಗಮನ ಸೆಳೆದ ಖಲೀಲ್ ಅಹ್ಮದ್ 48 ರನ್‌ಗೆ 3 ವಿಕೆಟ್ ಕಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News