ಬಿಎಸ್‌ಎಫ್ ಯೋಧನ ಕತ್ತು ಸೀಳಿ ಕ್ರೌರ್ಯ ಮೆರೆದ ಪಾಕಿಸ್ತಾನಿ ಸೈನಿಕರು: ಗಡಿಯಲ್ಲಿ ಕಟ್ಟೆಚ್ಚರ ಘೋಷಣೆ

Update: 2018-09-19 14:27 GMT

ಜಮ್ಮು/ಹೊಸದಿಲ್ಲಿ,ಸೆ.19: ಜಮ್ಮು ಸಮೀಪ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರು ಬಿಎಸ್‌ಎಫ್ ಯೋಧನನ್ನು ಕತ್ತು ಸೀಳಿ ಕೊಂದು ಕ್ರೌರ್ಯವನ್ನು ಮೆರೆದಿದ್ದು,ಈ ಘಟನೆ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ.

ರಾಮಗಡ ವಿಭಾಗದಲ್ಲಿ ಮಂಗಳವಾರ ಈ ಬರ್ಬರ ಘಟನೆ ನಡೆದಿದ್ದು, ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆ(ಎಲ್‌ಎಸಿ)ಯುದ್ದಕ್ಕೂ ಕಟ್ಟೆಚ್ಚರವನ್ನು ಘೋಷಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಿಎಸ್‌ಎಫ್ ಪಾಕಿಸ್ತಾನ್ ರೇಂಜರ್ಸ್ ಪಡೆಗೆ ಬಲವಾದ ದೂರನ್ನು ಸಲ್ಲಿಸಿದೆ.

ಹತ ಬಿಎಸ್‌ಎಫ್ ಹೆಡ್ ಕಾನ್‌ಸ್ಟೇಬಲ್ ನರೇಂದ್ರ ಕುಮಾರ ಅವರ ಶರೀರದಲ್ಲಿ ಮೂರು ಗುಂಡಿನ ಗಾಯಗಳೂ ಇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಾಯುವ ಮುನ್ನ ಅವರಿಗೆ ತೀವ್ರ ಚಿತ್ರಹಿಂಸೆ ನೀಡಲಾಗಿದ್ದು,ಕಣ್ಣುಗುಡ್ಡೆಗಳನ್ನು ಬಗೆಯಲಾಗಿದೆ. ಬಿಎಸ್‌ಎಫ್ ಶೋಧ ತಂಡಗಳ ಮೇಲೆ ಗುಂಡು ಹಾರಾಟ ನಡೆಯದಂತೆ ನೋಡಿಕೊಳ್ಳಲು ಪಾಕ್ ಅಧಿಕಾರಿಗಳಿಗೆ ಕರೆಗಳನ್ನು ಮಾಡಿದ್ದರೂ ಅವರು ಪ್ರತಿಕ್ರಿಯಿಸಿರಲಿಲ್ಲ, ಹಿಗಾಗಿ ನರೇಂದ್ರ ಕುಮಾರ ಶವವನ್ನು ಪತ್ತೆ ಹಚ್ಚಲು ಆರು ಗಂಟೆಗಳಷ್ಟು ಸುದೀರ್ಘ ಸಮಯ ಬೇಕಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಮಂಗಳವಾರ ಬೆಳಿಗ್ಗೆ ನರೇಂದ್ರ ಕುಮಾರ ಅವರು ನಾಲ್ವರು ಯೋಧರ ತಂಡದೊಂದಿಗೆ ಗಡಿಬೇಲಿಯಾಚೆ ಬೆಳೆದಿದ್ದ ಕಾಡುಹುಲ್ಲನ್ನು ಕತ್ತರಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಪಾಕಿಸ್ತಾನಿ ಸೈನಿಕರು ಗುಂಡಿನ ದಾಳಿ ನಡೆಸಿದ್ದು,ನರೇಂದ್ರ ಕುಮಾರ್ ನಾಪತ್ತೆಯಾಗಿದ್ದರು. ಅವರನ್ನು ಪತ್ತೆ ಹಚ್ಚಲು ಜಂಟಿ ಶೋಧ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನಿ ರೇಂಜರ್‌ಗಳಿಗೆ ಕೇಳಿಕೊಳ್ಳಲಾಗಿತ್ತಾದರೂ ಒಂದು ನಿರ್ದಿಷ್ಟ ಸ್ಥಳದವರೆಗೆ ಬಂದಿದ್ದ ಅವರು,ನೀರು ನಿಂತಿರುವುದರಿಂದ ತಮಗೆ ಶೋಧಕಾರ್ಯ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು ಎಂದು ಮೂಲಗಳು ಹೇಳಿವೆ.

ಸೂರ್ಯಾಸ್ತದವರೆಗೂ ಕಾದಿದ್ದ ಬಿಎಸ್‌ಎಫ್ ಯೋಧರು ಬಳಿಕ ಅಪಾಯಕಾರಿ ಕಾರ್ಯಾಚರಣೆಯನ್ನು ಕೈಗೊಂಡು ನರೇಂದ್ರ ಕುಮಾರ ಅವರ ಶವವನ್ನು ಪತ್ತೆ ಹಚ್ಚಿ ತಮ್ಮ ನೆಲೆಗೆ ತಂದಿದ್ದಾರೆ.

ಇದು ಅಂತರರಾಷ್ಟ್ರೀಯ ಗಡಿಯಲ್ಲಿ ನಡೆದಿರುವ,ಬಹುಶಃ ಇಂತಹ ಮೊದಲ ಕ್ರೂರ ಘಟನೆಯಾಗಿದೆ. ಇದನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಈ ವಿಷಯವನ್ನು ಪಾಕ್ ಅಧಿಕಾರಿಗಳ ಜೊತೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News