ಪ್ರಯಾಣಿಕರಿದ್ದಂತೆ ಬಸ್ ಗೆ ಬೆಂಕಿ ಹಚ್ಚಿದ ಮಹಿಳೆ: ಕಾರಣವೇನು ಗೊತ್ತಾ ?

Update: 2018-09-19 14:37 GMT

ವಾರಣಾಸಿ, ಸೆ.19: ಉತ್ತರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ಪೂರ್ವಾಂಚಲ ರಾಜ್ಯವನ್ನು ರಚಿಸಬೇಕೆಂದು ಆಗ್ರಹಿಸುತ್ತಿರುವ ಮಹಿಳೆಯೋರ್ವಳು ಇಲ್ಲಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಸಾಧ್ಯವಾಗದೆ ಹತಾಶಗೊಂಡು ಬುಧವಾರ ಬೆಳಿಗ್ಗೆ ಇಲ್ಲಿಯ ಕ್ಯಾಂಟೋನ್ಮೆಂಟ್ ಬಸ್ ನಿಲ್ದಾಣದಲ್ಲಿ ಬಸ್ಸೊಂದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಐಷಾರಾಮಿ ಬಸ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದು ಪಾರಾಗಿದ್ದಾರೆ. ವಂದನಾ ರಘುವಂಶಿ ಎಂಬ ಈ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ರಘುವಂಶಿ ವೋಲ್ವೊ ಬಸ್ಸಿನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದು,ಅದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.ಬೆಂಕಿಯನ್ನು ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸುವಂತಾಗಿತ್ತು.

ತನ್ನ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸಿ ಆ.15ರಿಂದ ಅನಿರ್ದಿಷ್ಟಾವಧಿ ನಿರಶನದಲ್ಲಿ ತೊಡಗಿದ್ದ ರಘುವಂಶಿಯ ಆರೋಗ್ಯ ಹದಗೆಟ್ಟಿದ್ದರಿಂದ ಆ.29ರಂದು ಆಕೆಗೆ ಬಲವಂತದಿಂದ ಆಹಾರವನ್ನು ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದರು. ಮೋದಿ ತನ್ನ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಸೆ.17-18ರಂದು ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News