ಪ್ರಧಾನ ಪರಮಾಣು ಸಂಕೀರ್ಣ ಶಾಶ್ವತ ನಾಶ: ದಕ್ಷಿಣ ಕೊರಿಯಕ್ಕೆ ಭರವಸೆ ನೀಡಿದ ಕಿಮ್ ಜಾಂಗ್ ಉನ್

Update: 2018-09-19 15:30 GMT

ಪ್ಯಾಂಗ್‌ಯಾಂಗ್ (ಉತ್ತರ ಕೊರಿಯ), ಸೆ. 19: ಉತ್ತರ ಕೊರಿಯದ ಕ್ರಮಗಳಿಗೆ ಪೂರಕವಾಗಿ ಅಮೆರಿಕವೂ ಕ್ರಮಗಳನ್ನು ತೆಗೆದುಕೊಂಡರೆ, ಉತ್ತರ ಕೊರಿಯದ ಪ್ರಧಾನ ಪರಮಾಣು ಸಂಕೀರ್ಣವನ್ನು ಶಾಶ್ವತವಾಗಿ ನಾಶಪಡಿಸುವ ಭರವಸೆಯನ್ನು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಬುಧವಾರ ನೀಡಿದ್ದಾರೆ.

ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್ ಜೊತೆಗಿನ ಶೃಂಗ ಸಮ್ಮೇಳನದ ಎರಡನೇ ದಿನದಂದು ಕಿಮ್ ಜಾಂಗ್ ಉನ್ ಈ ಭರವಸೆ ನೀಡಿದ್ದಾರೆ.

ಪ್ರಮುಖ ಕ್ಷಿಪಣಿ ಪರೀಕ್ಷಾ ಸ್ಥಾವರದ ಮುಚ್ಚುಗಡೆಯನ್ನು ಪರಿಶೀಲಿಸಲು ಅಂತಾರಾಷ್ಟ್ರೀಯ ವೀಕ್ಷಕರಿಗೆ ಅವಕಾಶ ನೀಡುವುದು ಹಾಗೂ 2032ರ ಒಲಿಂಪಿಕ್ಸ್‌ನ ಆತಿಥ್ಯ ವಹಿಸಲು ಜೊತೆಯಾಗಿ ಕೆಲಸ ಮಾಡುವುದು- ಇವೇ ಮುಂತಾದ ಹಲವಾರು ಭರವಸೆಗಳನ್ನು ಉತ್ತರ ಕೊರಿಯದ ನಾಯಕ ದಕ್ಷಿಣ ಕೊರಿಯದ ಅಧ್ಯಕ್ಷರಿಗೆ ನೀಡಿದ್ದಾರೆ.

ಬುಧವಾರ ಬೆಳಗ್ಗೆ ಮುಚ್ಚಿದ ಕೋಣೆಯಲ್ಲಿ ಮಾತುಕತೆ ನಡೆಸಿದ ಬಳಿಕ, ಉಭಯ ನಾಯಕರು ಉತ್ತರ ಮತ್ತು ದಕ್ಷಿಣ ಕೊರಿಯದ ವರದಿಗಾರರಿಗೆ ಜಂಟಿ ಹೇಳಿಕೆಯೊಂದನ್ನು ನೀಡಿದರು.

ಕೊರಿಯ ಪರ್ಯಾಯ ದ್ವೀಪದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯೊಂದನ್ನು ಇಟ್ಟಿರುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು.

  ‘‘ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣು ಅಸ್ತ್ರಗಳು ಮತ್ತು ಪರಮಾಣು ಬೆದರಿಕೆಯಿಂದ ಮುಕ್ತವಾದ ಶಾಂತಿಯುತ ಭೂಮಿಯನ್ನಾಗಿ ಮಾಡಲು ನಾವು ಒಪ್ಪಿಕೊಂಡಿದ್ದೇವೆ’’ ಎಂದು ದಕ್ಷಿಣ ಕೊರಿಯದ ಅಧ್ಯಕ್ಷರು ತಂಗಿರುವ ಅತಿಥಿ ಗೃಹದಲ್ಲಿ ಅವರ ಪಕ್ಕದಲ್ಲಿ ನಿಂತು ಉತ್ತರ ಕೊರಿಯದ ಕಿಮ್ ಜಾಂಗ್ ಉನ್ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News