ಸಿರಿಯದಲ್ಲಿ ರಶ್ಯ ಯುದ್ಧವಿಮಾನ ಪತನ: ಉದ್ವಿಗ್ನತೆ ಶಮನಕ್ಕೆ ಮುಂದಾದ ಪುಟಿನ್, ನೆತನ್ಯಾಹು

Update: 2018-09-19 15:32 GMT

ಬೈರೂತ್, ಸೆ. 19: ಸಿರಿಯದಲ್ಲಿ ರಶ್ಯ ಯುದ್ಧವಿಮಾನವೊಂದರ ಪತನಕ್ಕೆ ಸಂಬಂಧಿಸಿ ರಶ್ಯ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ನಿರ್ಧರಿಸಿದ್ದಾರೆ.

ಇಸ್ರೇಲ್ ನಡೆಸಿದ ವಾಯು ದಾಳಿಯ ಬಳಿಕ, ಸಿರಿಯ ಸರಕಾರಿ ಪಡೆಗಳು ತಪ್ಪು ಕಲ್ಪನೆಯಿಂದ ರಶ್ಯದ ಯುದ್ಧ ವಿಮಾನವೊಂದನ್ನು ಹೊಡೆದು ಉರುಳಿಸಿರುವುದನ್ನು ಸ್ಮರಿಸಬಹುದಾಗಿದೆ.

ಸೋಮವಾರ ರಾತ್ರಿ ನಡೆದ ಘಟನೆಯು, ರಶ್ಯ 2015ರಲ್ಲಿ ಸಿರಿಯ ಆಂತರಿಕ ಯುದ್ಧದಲ್ಲಿ ಮಧ್ಯಪ್ರವೇಶಿಸಿದ ಬಳಿಕ, ಉಭಯ ಸೇನೆಗಳ ನಡುವೆ ನಡೆದ ಭೀಕರ ಘಟನೆಯಾಗಿದೆ.

ಸೋಮವಾರದ ಘಟನೆಯು ದುರಂತಕಾರಿ ಆಕಸ್ಮಿಕ ಸನ್ನಿವೇಶಗಳ ಫಲಿತಾಂಶವಾಗಿದೆ ಎಂದು ಪುಟಿನ್ ಹೇಳಿದ್ದಾರೆ.

ಉತ್ತರ ಸಿರಿಯದ ಇದ್ಲಿಬ್ ಪ್ರಾಂತದಲ್ಲಿ ಬಂಡುಕೋರರನ್ನು ಹೊರಗಟ್ಟಲು ನಡೆಸಲು ಉದ್ದೇಶಿಸಲಾಗಿದ್ದ ಸೇನಾ ಕಾರ್ಯಾಚರಣೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ರಶ್ಯ ಮತ್ತು ಟರ್ಕಿಗಳು ಘೋಷಿಸಿದ ಬಳಿಕ ರಶ್ಯ ವಿಮಾನವನ್ನು ಮೆಡಿಟರೇನಿಯನ್ ಸಮುದ್ರದ ಆಕಾಶದಲ್ಲಿ ಹೊಡೆದುರುಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News