ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ: ಸಿಎಜಿ ಭೇಟಿ ಮಾಡಿ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್ ನಿಯೋಗ

Update: 2018-09-19 16:44 GMT

ಹೊಸದಿಲ್ಲಿ, ಸೆ. 19: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಕಾಂಗ್ರೆಸ್‌ನ ಹಿರಿಯ ನಾಯಕರ ನಿಯೋಗವೊಂದು ಬುಧವಾರ ಭಾರತದ ಮಹಾಲೇಖಪಾಲ (ಸಿಎಜಿ)ರನ್ನು ಭೇಟಿಯಾಗಿದೆ ಹಾಗೂ ಈ ಒಪ್ಪಂದದಲ್ಲಿ ನಡೆದ ಭ್ರಷ್ಟಾಚಾರದ ಕುರಿತು ವರದಿ ಸಿದ್ದಗೊಳಿಸುವಂತೆ ಮನವಿ ಮಾಡಿದೆ. ಕಾಂಗ್ರೆಸ್ ನಿಯೋಗ ಜ್ಞಾಪನಾ ಪತ್ರವನ್ನು ಸಿಎಜಿಗೆ ಹಸ್ತಾಂತರಿಸಿದೆ ಹಾಗೂ ರಪೇಲ್ ಯುದ್ಧ ವಿಮಾನ ಖರೀದಿ ಬಗೆಗಿನ ವರದಿ ಬಹಿರಂಗವಾದ ಬಳಿಕ ಸತ್ಯ ಹೊರ ಬರಬಹುದು ಎಂಬ ನಿರೀಕ್ಷೆ ಇದೆ ಎಂದು ಹೇಳಿದೆ.

 ‘‘ಯುದ್ಧ ವಿಮಾನ ಖರೀದಿ ಒಪ್ಪಂದದ ಭ್ರಷ್ಚಾಚಾರದ ವಿವರವಾದ ದಾಖಲೆಗಳು ಹಾಗೂ ಸರಕಾರದಿಂದ ಮಾಡಿ ಆದ ತಪ್ಪು ಹಾಗೂ ಮಾಡದೇ ಆದ ತಪ್ಪಿನ ಬಗ್ಗೆ ನಾವು ಜ್ಞಾಪನಾ ಪತ್ರವನ್ನು ವಿವರವಾದ ದಾಖಲೆಗಳೊಂದಿಗೆ ನೀಡಿದ್ದೇವೆ. ಸಿಎಜಿ ಶೀಘ್ರ ವರದಿ ರೂಪಿಸಲಿದ್ದಾರೆ ಹಾಗೂ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಎಂದು ನಾವು ನಿರೀಕ್ಷಿಸುತ್ತೇವೆ’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಸಿಎಜಿ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಿಎಜಿಗೆ ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ‘‘ಖಾಸಗಿ ಸಂಸ್ಥೆಗೆ ಲಾಭವಾಗಲು ಒಪ್ಪಂದದಿಂದ ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಅನ್ನು ಹೇಗೆ ತೆಗೆದು ಹಾಕಲಾಯಿತು ಎಂದು ನಾವು ಸಿಎಜಿಗೆ ವಿವರಿಸಿದ್ದೇವೆ. ಸಿಎಜಿ ಕೂಡಲೇ ವರದಿ ಸಲ್ಲಿಸಲಿದ್ದಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಒಪ್ಪಂದದ ಎಲ್ಲ ಅಂಶಗಳನ್ನು ನಾವು ಈಗಾಗಲೇ ಪರಿಶೀಲಿಸಿದ್ದೇವೆ ಎಂದು ಸಿಎಜಿ ನಮಗೆ ತಿಳಿಸಿದೆ ’’ ಎಂದು ಅವರು ಹೇಳಿದ್ದಾರೆ.

ಈ ವರದಿ ಸಾರ್ವಜನಿಕರ ಮುಂದೆ ಯಾವಾಗ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ. ಬಳಿಕ ನಿಜವಾದ ಭ್ರಷ್ಟಾಚಾರ ಬಹಿರಂಗವಾಗಲಿದೆ ಹಾಗೂ ಸತ್ಯ ಹೊರಬೀಳಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News