ಭಾರತದ ಅಸಂಘಟಿತ ರಂಗದಲ್ಲಿ ಎಲ್ಲವೂ ಸರಿಯಾಗಿದೆಯೇ?

Update: 2018-09-19 18:31 GMT

ಹಾಲಿ ಹಣಕಾಸು ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಭಾರತದ ಒಟ್ಟು ದೇಶಿಯ ಉತ್ಪನ್ನ(ಜೆಡಿಪಿ) ಶೇ. 8.2ರಷ್ಟು ಹೆಚ್ಚಳವಾಗಿದೆ ಎನ್ನುತ್ತದೆ ಇತ್ತೀಚೆಗೆ ಬಿಡುಗಡೆ ಮಾಡಲ್ಪಟ್ಟ ಅಧಿಕೃತ ದತ್ತಾಂಶ.

ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯ ರೂಪದಲ್ಲಿ ಅರ್ಥವ್ಯವಸ್ಥೆಯು ಎರಡು ಆಘಾತಗಳನ್ನು ಅನುಭವಿಸಿದ ಕಳೆದ ಎರಡು ವರ್ಷಗಳಲ್ಲಿ ಇದು ಗರಿಷ್ಠ ಅಭಿವೃದ್ಧಿ ಪ್ರತಿಶತ. ತಯಾರಿಕಾ ರಂಗದಲ್ಲಿ (ಶೇ.13.50), ಕಟ್ಟಡ ನಿರ್ಮಾಣ ರಂಗದಲ್ಲಿ (ಶೇ.8.7) ಮತ್ತು ಕೃಷಿ ಹಾಗೂ ಸಂಬಂಧಿತ ರಂಗಗಳಲ್ಲಿ (ಶೇ.5.3) ಆಗಿರುವ ಅಭಿವೃದ್ಧಿಯೇ ಈ ಮಟ್ಟದ ಏರಿಕೆಗೆ (ಶೇ.8.2) ಕಾರಣ. ಕಳೆದ ವರ್ಷ ಈ ಮಟ್ಟದ ಉತ್ಪಾದನೆಯಾಗದೆ ಇದೇ ಅವಧಿಯಲ್ಲಿ ತುಂಬ ಕಡಿಮೆ ಪ್ರಮಾಣದಲ್ಲಿ ಅಭಿವೃದ್ಧಿ ಆಗಿರುವುದೇ ಈ ಪ್ರತಿಶತಗಳು ಹೆಚ್ಚು ಅನ್ನಿಸಲು ಕಾರಣ ಎಂದು ಟೀಕಾಕಾರರು ವಾದಿಸಿದ್ದಾರೆ: ತಯಾರಿಕಾರಂಗ ಶೇ. 1.8ರಷ್ಟು ಇಳಿಕೆ ಕಂಡಿತ್ತು, ಕಟ್ಟಡ ನಿರ್ಮಾಣರಂಗ ಶೇ.1.8ರಷ್ಟು ಏರಿಕೆ ಕಂಡಿತ್ತು ಮತ್ತು ಕೃಷಿ ಶೇ.3ರಷ್ಟು ಏರಿಕೆ ಕಂಡಿತ್ತು. ಇದನ್ನು ಮೂಲ ಪರಿಣಾಮ(ಬೇಸ್ ಇಫೆಕ್ಟ್) ಎಂದು ಕರೆಯಲಾಗುತ್ತದೆ.

ಕಳೆದ ವರ್ಷದ ತ್ರೈಮಾಸಿಕ ಅವಧಿಯಲ್ಲಿ ದೇಶದಲ್ಲಿ ಅಭಿವೃದ್ಧಿ ಕಡಿಮೆ ಯಾಗಲು ನೋಟುರದ್ದತಿಯ ಪರಿಣಾಮವೇ ಕಾರಣ. ಸೇವಾರಂಗದಲ್ಲಾದ ಅಭಿವೃದ್ಧಿಯ ದರ ಕಳೆದ ವರ್ಷಕ್ಕೆ ಹೋಲಿಸಿದಾಗ ಕಡಿಮೆಯಾಗಿರುವುದು ಕಂಡುಬರುತ್ತದೆ. ಅಂದರೆ ವಾಣಿಜ್ಯೋದ್ಯಮಗಳು ಮೆಶಿನರಿ ಮತ್ತು ಕಟ್ಟಡಗಳಲ್ಲಿ ಹೆಚ್ಚು ಹಣ ಮಾಡುತ್ತಿಲ್ಲ. ಹೀಗೆ, ಈಗ ಬೆಳವಣಿಗೆಯ ದರದಲ್ಲಿ ಏರಿಕೆಯ ಕೊರತೆಯಿಂದಾಗಿ ಈ ದರದಲ್ಲಿ ಆರ್ಥಿಕ ಬೆಳವಣಿಗೆ ಮುಂದುವರಿಯದೆ ಇರಬಹುದು.

ಶೇ. 8.2 ಜಿಡಿಪಿ ಎರಿಕೆಯಾಗಿದ್ದಲ್ಲಿ ಅರ್ಥವ್ಯವಸ್ಥೆಯ ಎಲ್ಲ ವಲಯ ಗಳಲ್ಲಿ ‘ಚೆನ್ನಾಗಿದೆ’ ಎಂಬ ಭಾವನೆ (ಫೀಲ್ ಗುಡ್) ಕಾಣಿಸಬೇಕಿತ್ತು. ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ವ್ಯಾಪಾರಿಗಳು ಯಾಕಾಗಿ ಪ್ರತಿಭಟಿಸುತ್ತಿದ್ದಾರೆ.? ಕೃಷಿರಂಗದ ಬೆಳವಣಿಗೆಯ ದರದಲ್ಲಿ ಏರಿಕೆ ಯಾಗಿದ್ದರೆ ರೈತರು ಈಗ ಗಳಿಸುವುದಕ್ಕಿಂತ ಹೆಚ್ಚು ಗಳಿಸಬೇಕಾಗಿತ್ತು. ಅವರು ಪ್ರತಿಭಟಿಸಬಾರದಿತ್ತಲ್ಲವೇ. ನೌಕರಿಗಳಿಗಾಗಿ ಪ್ರತಿಭಟಿಸುತ್ತಿರುವ ಯುವಜನತೆ ಸುಮ್ಮನೆ, ಕಾರಣವಿಲ್ಲದೆ ಪ್ರತಿಭಟಿಸುತ್ತಿದ್ದಾರೆಯೇ? ಅರ್ಥವ್ಯವಸ್ಥೆಯಲ್ಲಿ ಉದ್ಯೋಗಗಳ ಸೃಷ್ಟಿಯ ಭರಾಟೆ ಇರಬೇಕಾಗಿತ್ತು. ವ್ಯಾಪಾರಿಗಳು ಕಾರಣವಿಲ್ಲದೆ ದೂರುತ್ತಿದ್ದಾರೆಯೇ?

ನೋಟು ರದ್ದತಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲೇ ಇಲ್ಲ ಎಂದು ಸರಕಾರ ಏರುದನಿಯಲ್ಲಿ ವಾದಿಸುತ್ತಿದೆ. ಒಂದು ವೇಳೆ ಅಂತಹ ಪರಿಣಾಮವೇನಾದರೂ ಆಗಿದ್ದರೂ, ಅದು ತಾತ್ಕಾಲಿಕ ಮತ್ತು ಅದು ಬಹಳ ಬೇಗನೆ ಮರೆಯಾಯಿತು ಎನ್ನುತ್ತಿದೆ

ಅದೇ ರೀತಿಯಾಗಿ ಜಿಎಸ್‌ಟಿ ಕೂಡ ದೇಶಕ್ಕೆ ತುಂಬ ಅಗತ್ಯವಾಗಿದ್ದ ಒಂದು ಸುಧಾರಣೆ ಎಂದು ಸರಕಾರ ವಾದಿಸಿದೆ. ಆರಂಭದ ಕೆಲವು ಸಮಸ್ಯೆ ಗಳ ಬಳಿಕ ಅದು ಅರ್ಥವ್ಯವಸ್ಥೆಯ ಮೇಲೆ ಧನಾತ್ಮಕ (ಪಾಸಿಟಿವ್) ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

ಈ ವಾದಗಳ ಸಮಸ್ಯೆಯೆಂದರೆ ಈ ಎಲ್ಲಾ ವಾದಗಳಲ್ಲಿ ಅಸಂಘಟಿತ ವಲಯದ ಉಲ್ಲೇಖವೇ ಬರುವುದಿಲ್ಲ. ಈ ರಂಗವು ಜಿಡಿಪಿಯ ಶೇ.45ರಷ್ಟು ಇದೆ ಮತ್ತು ದೇಶದ ಶ್ರಮಶಕ್ತಿಯ ಶೇ.93 ಮಂದಿ ಈ ರಂಗದಲ್ಲೇ ಉದ್ಯೋಗ ಮಾಡುತ್ತಾರೆ. ಈ ರಂಗದ ದತ್ತಾಂಶಗಳನ್ನು ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಕೂಡ ಸಂಗ್ರಹಿಸದೆ ಯಾವಾಗಲೋ ಒಮ್ಮೆ ಸಂಗ್ರಹಿಸಲಾಗುತ್ತದೆ. ಕಾರ್ಪೊರೇಟ್ ರಂಗ ಮತ್ತು ಕೃಷಿ ಇತ್ಯಾದಿ ರಂಗಗಳನ್ನಾಧರಿಸಿಯೇ ತ್ರೈಮಾಸಿಕ ಜಿಡಿಪಿ ದರವನ್ನು ಲೆಕ್ಕ ಹಾಕಲಾಗುತ್ತದೆ.

ಹಾಗಾದರೆ, ದತ್ತಾಂಶಗಳಿಲ್ಲದೆ ಅಸಂಘಟಿತ ವರ್ಗದ ಬೆಳವಣಿಗೆಯನ್ನು ಹೇಗೆ ಅಂದಾಜಿಸಲಾಗುತ್ತದೆ?
ಕೆಲವು ಊಹೆ (ಅಸಂಪ್ಶನ್)ಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ, ಸಂಘಟಿತ ರಂಗದ ಪ್ರಮಾಣಕ್ಕೆ ಅನುಗುಣವಾಗಿ ಅಸಂಘಟಿತ ರಂಗ ಬೆಳೆಯುತ್ತಿದೆ. ಒಂದು ಉಲ್ಲೇಖಿತ ವರ್ಷದಲ್ಲಿ ಎರಡು ರಂಗಗಳ ದಾಮಾಶಯವನ್ನು ಅಂದಾಜಿಸಿ, ಮುಂದಿನ ಸಮೀಕ್ಷೆ ನಡೆಸುವ ವರೆಗೆ ಇದನ್ನೇ ಬಳಸಲಾಗುತ್ತದೆ. ಆದರೆ, ಎರಡು ಸಮೀಕ್ಷೆಗಳ ಮಧ್ಯೆ ಒಂದು ಆರ್ಥಿಕ ಆಘಾತ ಉಂಟಾದರೆ, ಆಗ ದಾಮಾಶಯಗಳು ಬದಲಾಗುತ್ತದೆ ಮತ್ತು ಹಳೆಯ ದಾಮಾಶಯ ಅನ್ವಯವಾಗುವುದಿಲ್ಲ.

ಬಹಳಷ್ಟು ಮಟ್ಟಿಗೆ ನಗದನ್ನೇ ಬಳಸುವ ಅಸಂಘಟಿತ ರಂಗಗಳು ನೋಟು ರದ್ದತಿಯಿಂದಾಗಿ ಬೃಹತ್ ಪ್ರಮಾಣದ ತೊಂದರೆಗೊಳಗಾದವು. ಎಂಟು ತಿಂಗಳ ಕಾಲ ಸತತವಾದ ನಗದು ಕೊರತೆಯಿಂದಾಗಿ ಅವು ಬಹಳ ಸಮಯದವರೆಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಅವು ಪುನಃ ಜಿಎಸ್‌ಟಿಯ ದಾಳಿಗೊಳಗಾದವು. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ), ರಿವರ್ಸ್ ಚಾರ್ಜ್ ಮೆಕ್ಯಾನಿಸಂ (ಆರ್‌ಸಿಎಂ), ಅಂತರ್‌ರಾಜ್ಯ ಮಾರಾಟಗಳ ಮೇಲೆ ಹೇರಲಾದ ಮಿತಿಗಳು ಇತ್ಯಾದಿಗಳಿಂದ ಅವು ಚೇತರಿಸಿಕೊಳ್ಳಲಾಗಲಿಲ್ಲ.

ಸರಕಾರದ ಅಧಿಕೃತ ಸಮೀಕ್ಷೆಗಳು ನಡೆದಿಲ್ಲವಾದರೂ ಖಾಸಗಿ ಸಮೀಕ್ಷೆಗಳನ್ನು ನಡೆಸಲಾಯಿತು; ಮತ್ತು ಈ ಸಮಸ್ಯೆಗಳು ಅಸಂಘಟಿತ ರಂಗದಲ್ಲಿ ತೀವ್ರ ಇಳಿತವಾಗಿರುವುದನ್ನು ತೋರಿಸುತ್ತವೆ.
ಅಸಂಘಟಿತ ರಂಗದಲ್ಲಾಗಿರುವ ಅಭಿವೃದ್ಧಿಯ ಇಳಿಕೆಯಿಂದಾಗಿ ಎರಡು ಪರಿಣಾಮಗಳಾದವು. ಅಸಂಘಟಿತ ರಂಗದಲ್ಲಾಗಬೇಕಿದ್ದ ಉತ್ಪಾದನೆಯು ಸಂಘಟಿತ ರಂಗದಲ್ಲಾಯಿತು ಮತ್ತು ಅಸಂಘಟಿತ ರಂಗದಿಂದ ಬರಬೇಕಿದ್ದ ರಾಶಿ ಬೇಡಿಕೆ (ಮಾಸ್ ಡಿಮಾಂಡ್) ಕುಸಿತ ಕಂಡಿತು.

ಒಟ್ಟಿನಲ್ಲಿ ಅರ್ಥವ್ಯವಸ್ಥೆಯಲ್ಲಾಗಿರುವ ಎರಡು ರೀತಿಯ ಚಲನೆಯ, ಅಂದರೆ ಸಂಘಟಿತ ರಂಗದ ಉತ್ಪಾದನೆಯಲ್ಲಿ ಕುಸಿತದ ಅರ್ಥವೇನೆಂದರೆ ತ್ರೈಮಾಸಿಕ ಅಭಿವೃದ್ಧಿಯ ನೋಟು ರದ್ದತಿ ಪೂರ್ವ ದಾಮಾಶಯಗಳು ನಿಜವಲ್ಲ. ನೋಟು ರದ್ದತಿಯ ಮೊದಲು ಅಸಂಘಟಿತ ಮತ್ತು ಸಂಘಟಿತ ರಂಗಗಳು ಜತೆ ಜತೆಯಾಗಿಯೇ ಅಭಿವೃದ್ಧಿ ಹೊಂದುತ್ತವೆ ಎಂಬುದು ನಿಜವಾಗಿತ್ತು. ಇದು ಈಗ ನಿಜವಾಗಿ ಉಳಿದಿಲ್ಲ.

ಇವೆಲ್ಲದರಿಂದ ಎರಡು ಮುಖ್ಯ ಸಂಗತಿಗಳನ್ನು ತಿಳಿಯಬಹುದಾಗಿದೆ. ಅಸಂಘಟಿತ ರಂಗದ ಹಿತಾಸಕ್ತಿಯನ್ನು ಬಲಿಕೊಟ್ಟು ಸಂಘಟಿತ ರಂಗ ಬೆಳೆಯುತ್ತಿದೆ. ಇದರಿಂದಾಗಿ ಅಸಂಘಟಿತ ರಂಗ ಬಿಕ್ಕಟ್ಟಿಗೆ ಸಿಲುಕಿದೆ. ಎರಡನೆಯದಾಗಿ ಅಧಿಕೃತ ದತ್ತಾಂಶಗಳನ್ನು ಸರಿಪಡಿಸಬೇಕಾಗಿದೆ ಮತ್ತು ಅಭಿವೃದ್ಧಿ ದರ ಶೇ. 8.2ಕ್ಕಿಂತ ತುಂಬ ಕಡಿಮೆ ಇದೆ ಎನ್ನಬೇಕಾಗುತ್ತದೆ.

ಕೃಪೆ: thewire.in

Writer - ಅರುಣ್ ಕುಮಾರ್

contributor

Editor - ಅರುಣ್ ಕುಮಾರ್

contributor

Similar News